ಕುತ್ತಿಗೆ ನೋವು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಕುಳಿತುಕೊಳ್ಳುವ ಭಂಗಿ, ಸ್ನಾಯುವಿನ ಒತ್ತಡ, ಕೆಲಸದ ಒತ್ತಡ ಸೇರಿದಂತೆ ಅನೇಕ ಕಾರಣಗಳಿಗೆ ಕುತ್ತಿಗೆ ನೋವು ಕಾಣಿಸಿಕೊಳ್ಳುತ್ತದೆ. ಇಡೀ ದಿನ ಕಂಪ್ಯೂಟರ್ ಮುಂದೆ ಕೆಲಸ ಮಾಡುವವರಿಗೆ ಕುತ್ತಿಗೆ ನೋವು ಹೆಚ್ಚಾಗಿ ಕಾಡುತ್ತದೆ. ಈ ಕುತ್ತಿಗೆ ನೋವನ್ನು ಕೆಲ ಮನೆ ಮದ್ದಿನ ಮೂಲಕ ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು.
ಐಸ್ ಮಸಾಜ್ : ಕೆಲವೊಮ್ಮೆ ಕುತ್ತಿಗೆ ಊದಿಕೊಂಡಿರುತ್ತದೆ. ಇಂಥ ಸಂದರ್ಭದಲ್ಲಿ ಕುತ್ತಿಗೆ ಮೇಲೆ ದಿನದಲ್ಲಿ ಅನೇಕ ಬಾರಿ ಕೆಲ ನಿಮಿಷಗಳ ಕಾಲ ಐಸ್ ಇಡುವ ಮೂಲಕ ನೋವನ್ನು ಕಡಿಮೆ ಮಾಡಬಹುದು. ಐಸ್ ಮಸಾಜ್ ಮಾಡುವುದ್ರಿಂದ ನೋವು ಕಡಿಮೆಯಾಗುವ ಜೊತೆಗೆ ಊದಿಕೊಂಡಿರುವುದು ಇಳಿಯುತ್ತದೆ.
ತಜ್ಞರ ಸಹಾಯದಿಂದ ಕುತ್ತಿಗೆ ಮಸಾಜ್ ಮಾಡಬಹುದು. ಕತ್ತನ್ನು ತೆಂಗಿನ ಎಣ್ಣೆ ಹಚ್ಚಿ ಮಸಾಜ್ ಮಾಡುವುದ್ರಿಂದ ವಿಶ್ರಾಂತಿ ಸಿಗುತ್ತದೆ. ಜೊತೆಗೆ ನೋವಿನಿಂದ ಮುಕ್ತಿ ಸಿಗುತ್ತದೆ.
ಯಾವುದಾದ್ರೂ ದೈಹಿಕ ಚಟುವಟಿಕೆಯಿಂದ ನಿಮಗೆ ನೋವು ಕಾಣಿಸಿಕೊಂಡಿದ್ದಲ್ಲಿ, ನೋವು ಕಡಿಮೆಯಾಗುವವರೆಗೆ ಇದನ್ನು ಮಾಡಬಾರದು. ಭಾರವಾದ ವಸ್ತುಗಳನ್ನು ಎತ್ತಬಾರದು. ಕುತ್ತಿಗೆಗೆ ನೋವುಂಟು ಮಾಡುವ ಯಾವುದೇ ಕೆಲಸ ಮಾಡಬಾರದು.
ಕೆಲವೊಂದು ಕತ್ತಿನ ವ್ಯಾಯಾಮ ಮಾಡುವ ಮೂಲಕ ನೋವನ್ನು ಕಡಿಮೆ ಮಾಡಬಹುದು. ನಿಮಗೆ ಹೆಚ್ಚಿನ ನೋವಿಲ್ಲವೆಂದಾದ್ರೆ ಕತ್ತನ್ನು ಮೇಲೆ ಕೆಳಗೆ, ಅಕ್ಕ ಪಕ್ಕ ತಿರುಗಿಸಿ ವ್ಯಾಯಾಮ ಮಾಡಿ. ಇದ್ರಿಂದ ಕುತ್ತಿಗೆ ಸ್ನಾಯುಗಳು ಸಡಿಲಗೊಳ್ಳುತ್ತವೆ. ಸಾದ್ಯವಾದಷ್ಟು ದಿಂಬು ಬಳಸದೆ ನಿದ್ರೆ ಮಾಡಲು ಪ್ರಯತ್ನಿಸಿ. ಸಾಧ್ಯವಾಗಿಲ್ಲವೆಂದ್ರೆ ಇದಕ್ಕಾಗಿಯೇ ತಯಾರಿಸಿದ ವಿಶೇಷ ದಿಂಬಿನ ಬಳಕೆ ಮಾಡಿ.