ಕಳೆದ ಆರು ವರ್ಷಗಳಿಂದ ಕುತ್ತಿಗೆಗೆ ಟೈರ್ ಸಿಲುಕಿಕೊಂಡಿದ್ದ ಇಂಡೋನೇಷ್ಯಾದ ಮೊಸಳೆಗೆ ಮುಕ್ತಿ ಸಿಕ್ಕಿದೆ.
ಸುಲವೆಸಿ ದ್ವೀಪದಲ್ಲಿ ಸರೀಸೃಪ ಪ್ರೇಮಿಯೊಬ್ಬರು ಆರು ವರ್ಷಗಳ ನಂತರ ಮೊಸಳೆಯನ್ನು ಟೈರ್ ನಿಂದ ಕೊನೆಗೂ ಮುಕ್ತಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. 13.12 ಅಡಿ ಉದ್ದದ ಮೊಸಳೆಯ ಗಾತ್ರ ಹೆಚ್ಚಾದಂತೆ ಟೈರ್ ಉಸಿರುಗಟ್ಟಿಸಬಹುದು ಎಂದು ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದರು.
ಮೊಸಳೆಯು ಮೊದಲು ರಕ್ಷಣಾ ಪ್ರಯತ್ನಗಳಿಗೆ ಒಳಪಟ್ಟಿತ್ತು. ಮೊಸಳೆ ರಾಂಗ್ಲರ್ ಮತ್ತು ನ್ಯಾಷನಲ್ ಜಿಯೋಗ್ರಾಫಿಕ್ ಟಿವಿ ನಿರೂಪಕ ಮ್ಯಾಟ್ ರೈಟ್ 2020 ರಲ್ಲಿ ಇಂಡೋನೇಷ್ಯಾಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮೊಸಳೆಯನ್ನು ಟೈರ್ ನಿಂದ ಮುಕ್ತಗೊಳಿಸಲು ಪ್ರಯತ್ನಿಸಿದ್ರೂ ಕೂಡ ಸಾಧ್ಯವಾಗಿರಲಿಲ್ಲ.
ಇದೀಗ ಸ್ಥಳೀಯ ನಿವಾಸಿ 35 ವರ್ಷದ ತಿಲಿ ಎಂಬುವವರು ಮೊಸಳೆಯ ಕೊರಳಿನಲ್ಲಿದ್ದ ಟೈರ್ ತೆಗೆದಿದ್ದಾರೆ. ಸ್ವತಃ ಮೊಸಳೆಯನ್ನು ಹಿಡಿದ ತಿಲಿ, ಸಹಾಯಕ್ಕೆ ಸ್ಥಳೀಯರ ಸಹಕಾರ ಕೋರಿದ್ದಾರೆ. ಆದರೆ, ಜನರು ಭಯದಿಂದ ಥರಥರನೇ ನಡುಗಿದ್ದರಂತೆ. ತಿಲಿ ಮೊಸಳೆಯನ್ನು ಹೇಗಾದರೂ ಹಿಡಿಯಬೇಕೆಂದು ಪ್ರಯತ್ನಪಡುತ್ತಿದ್ದರೆ, ಸ್ಥಳೀಯ ಜನರು ಮಾತ್ರ ಈತ ಕಾಟಾಚಾರಕ್ಕೆ ಮಾಡುತ್ತಿದ್ದಾನಾ ಎಂಬ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರಂತೆ.
ಮೂರು ವಾರಗಳ ಕಠಿಣ ಪರಿಶ್ರಮದ ಬಳಿಕ ಕೊನೆಗೂ ಟೈರ್ ಅನ್ನು ತೆಗೆಯುವಲ್ಲಿ ತಿಲಿ ಯಶಸ್ವಿಯಾಗಿದ್ದಾರೆ. ಟೈರ್ ಅನ್ನು ತೆಗೆಯಲು ಅವರು ಗರಗಸವನ್ನು ಬಳಸಿದ್ದಾರೆ.