ಬೆಂಗಳೂರು: ಕೇಂದ್ರ ಸಚಿವ ಸಂಪುಟ ಪುನಾರಚನೆಗೆ ಕೇವಲ ಎರಡು ದಿನ ಮಾತ್ರ ಬಾಕಿಯಿದ್ದು, ರಾಜ್ಯದ ಹಲವು ನಾಯಕರು ದೆಹಲಿಯತ್ತ ದೌಡಾಯಿಸುತ್ತಿದ್ದಾರೆ. ಇದೀಗ ಚಿತ್ರದುರ್ಗ ಬಿಜೆಪಿ ಸಂಸದ ಎ. ನಾರಾಯಣಸ್ವಾಮಿ ಕುಟುಂಬ ಸಮೇತ ದೆಹಲಿಯತ್ತ ಪ್ರಯಾಣಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಕೇಂದ್ರ ಸಚಿವ ಸಂಪುಟದಲ್ಲಿ ನಾರಾಯಣಸ್ವಾಮಿಗೂ ಸ್ಥಾನ ಸಿಗುವ ಸಾಧ್ಯತೆ ಹಿನ್ನೆಲೆಯಲ್ಲಿ ದೆಹಲಿಯತ್ತ ದೌಡಾಯಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಎ. ನಾರಾಯಣಸ್ವಾಮಿ, ರಾಜ್ಯದಿಂದ ಯಾರ್ಯಾರು ಸಚಿವರಾಗುತ್ತಿದ್ದಾರೆ ಎಂದು ನನಗೆ ಗೊತ್ತಿಲ್ಲ. ನನಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ನೀಡಿದರೆ ಯಶಸ್ವಿಯಾಗಿ ನಿರ್ವಹಿಸುತ್ತೇನೆ ಎಂದರು.
ನನಗೆ ಸಚಿವ ಸ್ಥಾನ ನೀಡುವ ಬಗ್ಗೆ ಮಾಹಿತಿ ಇಲ್ಲ, ಕರೆಯೂ ಬಂದಿಲ್ಲ. ಪಕ್ಷದ ಸೂಚನೆಯನ್ನು ಪಾಲಿಸುತ್ತೇನೆ. ಶಾಸಕ, ಸಚಿವ, ಸಂಸದನಾಗಿಯೂ ಕಾರ್ಯನಿರ್ವಹಿಸಿದ್ದೇನೆ. ಯಾವ ಜವಾಬ್ದಾರಿ ನೀಡಿದರೂ ನಿಭಾಯಿಸುತ್ತೇನೆ. ಸಂಪುಟ ಪುನಾರಚನೆಯನ್ನು ಕಣ್ತುಂಬಿಕೊಳ್ಳುತ್ತೇನೆ. ಕುಟುಂಬದವರಿಗೆ ಹಿಮಾಲಯ ತೋರಿಸಲು ಕರೆದುಕೊಂಡು ಹೋಗುತ್ತಿದ್ದೇನೆ ಅಷ್ಟೇ. ನಮ್ಮನ್ನು ಎಲ್ಲಿಗೂ ಕರೆದುಕೊಂಡು ಹೋಗಿಲ್ಲ ಎಂದು ಹೇಳುತ್ತಿದ್ದರು. ಹಾಗಾಗಿ ಕುಟುಂಬಸ್ಥರನ್ನು ಹಿಮಾಲಯಕ್ಕೆ ಕರೆದುಕೊಂಡು ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ.