ಕೊರೊನಾ ಎಲ್ಲರ ಬದುಕಲ್ಲೂ ಸಾಕಷ್ಟು ಏರಿಳಿತವನ್ನು ತಂದಿದೆ. ಕೆಲವರು ಅದಕ್ಕೆ ತತ್ತರಿಸಿ ಹೋಗಿದ್ದರೆ ಇನ್ನು ಕೆಲವರು ಆ ಸೋಲನ್ನೇ ಮೆಟ್ಟಿಲುಗಳನ್ನಾಗಿಸಿಕೊಂಡು ಬದುಕನ್ನು ಬಂಗಾರವನ್ನಾಗಿಸಿಕೊಂಡಿದ್ದಾರೆ. ಸಂಸಾರವನ್ನು ಸಾಗಿಸಲು ಇದ್ದ ಐಸ್ ಕ್ರೀಂ ಅಂಗಡಿಯೊಂದನ್ನು ಕೊರೊನಾ ಕಾರಣದಿಂದ ಮುಚ್ಚಬೇಕಾದ ಪರಿಸ್ಥಿತಿ ಎದುರಾದಾಗ ಮುಂದೆ ಜೀವನ ಹೇಗೆ..? ಎಂಬ ಪ್ರಶ್ನೆಯೊಂದು ಛಾಯಾ ಮಹಾಲೆ ಅವರನ್ನು ಕಾಡಿತ್ತು. ಆದರೆ ಇದಕ್ಕೆಲ್ಲಾ ಅಂಜದೇ ಹಕ್ಕಿಯೊಂದು ಒಂದೊಂದೇ ಕಡ್ಡಿ ಕಚ್ಚಿ ತಂದು ತನ್ನ ಗೂಡು ಕಟ್ಟಿಕೊಳ್ಳುವಂತೆ ‘ಛಾಯಾ’ ಮಹಾಲೆ ಅವರು ತಮ್ಮ ಜೀವನವನ್ನು ಕಟ್ಟಿಕೊಂಡು ಪರಿ ಇಲ್ಲಿದೆ ನೋಡಿ.
ಛಾಯಾ ಮಹಾಲೆ ಹುಟ್ಟಿ, ಬೆಳೆದಿದ್ದು ಎಲ್ಲಾ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಶಿರಸಿ ಬಳಿಯ ಒಂದು ಹಳ್ಳಿಯಲ್ಲಿ. ಸಾಕಷ್ಟು ಕನಸುಗಳು ಕಣ್ಣಿನಲ್ಲಿದ್ದರೂ ಅದನ್ನೆಲ್ಲಾ ನನಸಾಗಿಸಿಕೊಳ್ಳುವಷ್ಟು ಹಣಕಾಸಿನ ವ್ಯವಸ್ಥೆ ಇರಲಿಲ್ಲ. ಹಾಗಂತ ಕನಸುಗಳೆನ್ನೆಲ್ಲಾ ಗಾಳಿಗೆ ತೂರಿ ಹಣೆಬರಹವನ್ನೇ ನೆಚ್ಚಿಕೊಂಡು ಕುಳಿತವರು ಇವರಲ್ಲಾ.
ಸಿವಿಲ್ ಇಂಜಿನಿಯರಿಂಗ್ ಕನಸು ಕಟ್ಟಿಕೊಂಡು ಶಿರಸಿಯಿಂದ ಹುಬ್ಬಳಿಯ ಬಸ್ ಏರಿ ಕಾಲೇಜಿಗೆ ಸೇರಿಕೊಂಡರು. ಆದರೆ ಖರ್ಚು ಸ್ವಲ್ಪ ಕಡಿಮೆಯಾಗಬಹುದು ಎಂಬ ಕಾರಣಕ್ಕೆ ಫ್ಯಾಷನ್ ಡಿಸೈನಿಂಗ್, ಕಾಸ್ಟೂಮ್ ಮೇಕಿಂಗ್ ಡಿಪ್ಲೋಮಾ ಮಾಡಿದರು. ನಾನಾ ವಿನ್ಯಾಸವನ್ನು ಕರಗತ ಮಾಡಿಕೊಂಡರೂ, ಸ್ವಂತದ್ದೊಂದು ಹೊಲಿಗೆ ಯಂತ್ರ ತೆಗೆದುಕೊಳ್ಳುವುದಕ್ಕೆ ಆಗದೇ ಮತ್ತೆ ತನ್ನ ಕನಸುಗಳನ್ನು ತನ್ನಲ್ಲಿಯೇ ಅಡಗಿಸಿಕೊಂಡು ಮುಖದ ಮೇಲೊಂದು ನಗು ಇಟ್ಟುಕೊಂಡು ಬದುಕನ್ನು ಎದುರಿಸಲು ಸಿದ್ಧರಾದರು.
ಇದರ ನಡುವೆ ಬೆಂಗಳೂರಿನಲ್ಲೊಂದಿಷ್ಟು ದಿನ ಉದ್ಯೋಗವನ್ನು ಮಾಡಿದರು. ನಂತರ ಮದುವೆ, ಮುದ್ದಾದ ಹೆಣ್ಣು ಮಗುವಿನ ತಾಯಿಯಾಗಿ ಇದ್ದುದ್ದರಲ್ಲಿಯೇ ಖುಷಿಯಾಗಿದ್ದರು. ಸಂಸಾರ ಸಾಗಿಸಲು ಗಂಡನ ಐಸ್ ಕ್ರೀಂ ಅಂಗಡಿಯೊಂದು ಸಾಥ್ ನೀಡಿತ್ತು. ಮಗು, ಮನೆಕೆಲಸ, ಐಸ್ ಕ್ರೀಂ ಅಂಗಡಿ ಎಂದು ಬ್ಯುಸಿಯಾಗಿರುವಾಗಲೇ ಮನೆಯವರ ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದಿತ್ತು. ಅಷ್ಟೋ,ಇಷ್ಟೋ ಕೂಡಿಟ್ಟ ಹಣವೆಲ್ಲಾ ಗಂಡನ ಚಿಕಿತ್ಸೆಗೆಂದು ಖರ್ಚಾಯ್ತು. ಇದರ ಜತೆಗೆ ಕೊರೊನಾ ಕೂಡ ಇವರ ಬದುಕಿಗೆ ಮತ್ತೊಂದು ಪೆಟ್ಟು ನೀಡಿತ್ತು.
ಬದುಕು ಬದಲಿಸಿದ ‘ಮಹಿಳಾ ಮಾರುಕಟ್ಟೆ’
ಕೊರೊನಾ ಕಾರಣದಿಂದ ಐಸ್ ಕ್ರೀಂ ಬ್ಯುಸಿನೆಸ್ ಮಾಡುವುದು ಇವರಿಗೆ ಕಷ್ಟವಾಯ್ತು. ಮನೆ ಬಾಡಿಗೆ, ಮಗಳ ಓದು, ಇವೆಲ್ಲದರ ಯೋಚನೆ ಮನಸ್ಸನ್ನು ಅಲ್ಲೋಲಕಲ್ಲೋಲ ಮಾಡಿದರೂ, ಮತ್ತೆ ಬದುಕು ಕಟ್ಟಿಕೊಳ್ಳುತ್ತೇನೆ ಸೋಲಲ್ಲ ಎಂಬ ವಿಶ್ವಾಸ ಮನಸ್ಸಿನಲ್ಲಿ ಗಟ್ಟಿಯಾಗಿ ಮೂಡಿಸಿಕೊಂಡರು. ಹಿಂದೆ ಕಲಿತ ಹೊಲಿಗೆಯೇ ಬದುಕು ನಡೆಸಲು ಸಾಥ್ ನೀಡಿತು. ಮೊದಲೆಲ್ಲಾ ತಾನು ಹೊಲಿದ ಬ್ಯಾಗ್, ಬಟ್ಟೆ ಇವುಗಳ ಕುರಿತು ಫೇಸ್ ಬುಕ್ ನಲ್ಲಿ ಫೋಟೊ ಹಾಕುತ್ತಿದ್ದರು.
ಯಾರಾದರೂ ಚೆನ್ನಾಗಿದೆ ಎಂದು ಕಾಮೆಂಟ್ ಮಾಡಿದಾಗ, ಲೈಕ್ ಒತ್ತಿದಾಗ ತುಂಬಾ ಖುಷಿ ಪಡುತ್ತಿದ್ದರು. ಆದರೆ ಇಂದು ಅದೇ ಅವರ ಬದುಕು ಕಟ್ಟಿಕೊಳ್ಳಲು ನೆರವಾಗಿದೆ. ಸ್ನೇಹಿತರೊಬ್ಬರ ಮೂಲಕ ‘ಮಹಿಳಾ ಮಾರುಕಟ್ಟೆ’ ಸೇರಿಕೊಂಡು ಅಲ್ಲಿ ತಾನು ಹೊಲಿದ ಸೀರೆ ಕವರ್, ಬ್ಯಾಗ್, ಪೌಚ್ ಗಳ ಫೋಟೊ ಹಾಕಿದಾಗ ಅದಕ್ಕೆ ಸಿಕ್ಕ ಪ್ರತಿಕ್ರಿಯೆನ್ನು ಈಗಲೂ ನೆನೆದು ಖುಷಿ ಪಡುತ್ತಾರೆ. ಕಳೆದ ಒಂದು ವರ್ಷದಿಂದ ಇವರು ಬದುಕನ್ನು ಬದಲಿಸಿಕೊಂಡ ಪರಿಯೇ ಎಲ್ಲರಿಗೂ ಸ್ಫೂರ್ತಿ ಆಗುವಂತದ್ದು. ತನ್ನ ಕಷ್ಟಕಾಲದಲ್ಲಿ ಕೈ ಹಿಡಿದು ನಡೆಸಿದ್ದೇ ‘ಮಹಿಳಾ ಮಾರುಕಟ್ಟೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಮೊದಲು ಸಿಕ್ಕ ಆರ್ಡರ್ ನಿಂದ ಹಿಡಿದು ಇವತ್ತಿನವರೆಗೂ ಹಿಂದಿರುಗಿ ನೋಡಿದ್ದೇ ಇಲ್ಲ ಇವರು. ಇಂದು ಕೈ ತುಂಬಾ ಕೆಲಸವಿದ್ದು, ಅದೇ ಹೊಲಿಗೆಯಲ್ಲಿಯೇ ಜೀವನವನ್ನು ಸುಂದರವಾಗಿ ಕಟ್ಟಿಕೊಂಡಿದ್ದಾರೆ. ತಾನು ಬೆಳೆಯುವುದರ ಜತೆಗೆ ಇನ್ನೊಬ್ಬರನ್ನು ಬೆಳೆಸುವ ಮನೋಭಾವ ಇವರು ನಾಲ್ಕೈದು ಜನರಿಗೆ ಜೀವನ ಕಟ್ಟಿಕೊಳ್ಳಲು ನೆರವಾಗಿದ್ದಾರೆ.
ಏನೇನು ಲಭ್ಯವಿದೆ…?
ಅಂದ ಹಾಗೇ, ಛಾಯಾ ಮಹಾಲೆ ಅವರ ಬಳಿ ತರಕಾರಿ, ಈರುಳ್ಳಿ, ಬೆಳ್ಳುಳ್ಳಿ, ತೆಂಗಿನಕಾಯಿ, ಬೇಳೆ ಕಾಳು ಎಲ್ಲವನ್ನೂ ಸುಲಭವಾಗಿ ಶೇಖರಿಸಿ ಇಡಬಹುದಾದ ಬ್ಯಾಗಿನಿಂದ ಹಿಡಿದು ಡೆನಿಮ್ ಬಟ್ಟೆ ಬಳಸಿ ಮಾಡಿದ ಶೋಲ್ಡರ್ ಬ್ಯಾಗ್ ಗಳು ಸಿಗಲಿವೆ. ಇದರ ಜತೆಗೆ ಆಭರಣಗಳನ್ನು ಇಟ್ಟುಕೊಳ್ಳಲು ಸುಲಭವಾಗುವಂತಹ ಜ್ಯುವೆಲ್ಲರಿ ಪೌಚ್ ಗಳು ನಿಮ್ಮ ಕಣ್ಮನ ಸೆಳೆಯುವುದು ಗ್ಯಾರಂಟಿ. ಇವರು ನಿಮಗೆ ಬೇಕಾದ ರೀತಿಯಲ್ಲಿ ಅದನ್ನು ಕಸ್ಟಮೈಸ್ ಮಾಡಿಕೊಡುತ್ತಾರೆ. ಇನ್ನು ಟ್ರಾವೆಲ್ ಬ್ಯಾಗ್, ಫ್ರಿಡ್ಜ್ ಕವರ್, ಫ್ಯಾನ್ ಕವರ್, ಹೀಗೆ ಯಾವ ವಿನ್ಯಾಸದ ಬ್ಯಾಗ್ ಕೇಳಿದ್ರೂ ತಮ್ಮ ಕ್ರಿಯೆಟಿವಿಟಿ ಸೇರಿಸಿ ಛಾಯಾ ಮಹಾಲೆ ಮಾಡಿಕೊಡುತ್ತಾರೆ. ಇನ್ನು ಚಿಕ್ಕ ಮಕ್ಕಳಿಗೆ ಇಷ್ಟವಾಗುವ ಚೆಂದನೆಯ ಬ್ಯಾಗ್ ಕೂಡ ಇವರ ಬಳಿ ಲಭ್ಯ.
ಒಂದು ರೀತಿಯ ಮಲ್ಟಿಟ್ಯಾಲೆಂಟ್ ಇರುವ ಇವರು ಹೊಲಿಗೆಯ ಜತೆಗೆ ಸೀರೆ ಕುಚ್ಚು, ಶ್ಲೋಕ ಹೇಳುವುದು ಹೀಗೆ ಬಿಡುವಿಲ್ಲದ ಬದುಕಿಗೆ ತನ್ನನ್ನು ತಾನು ಒಡ್ಡಿಕೊಂಡಿದ್ದಾರೆ ಎಂದರೆ ತಪ್ಪಾಗಲಾರದು. ಕೆಲಸಕ್ಕೆ ಕುಳಿತರೆಂದರೆ ಅದನ್ನು ಮುಗಿಸದೇ ಏಳುವುದಿಲ್ಲ. ಇವರ ಹೊಲಿದ ಬ್ಯಾಗ್ ವಿದೇಶಕ್ಕೂ ಕಾಲಿಟ್ಟಿದೆ. ಮದುವೆ, ಇತರೆ ಫಂಕ್ಷನ್ ಗಳಿಗೆ ಉಡುಗೊರೆ ನೀಡುವುದಕ್ಕೆ ನಿಮಗೆ ಬೇಕಾದ ರೀತಿಯಲ್ಲಿ ಪೌಚ್, ಬ್ಯಾಗ್ ಗಳನ್ನು ಹೊಲಿದುಕೊಡುತ್ತಾರೆ.
ಇವೆಲ್ಲದರ ನಡುವೆ ಐಸ್ ಕ್ರೀಂ ಅಂಗಡಿಯನ್ನು ಮುಂದುವರಿಸಿಕೊಂಡು ಹೋಗುವ ಆಸೆಯೂ ಇವರಲ್ಲಿದೆ.ಇವರ ಕೆಲಸಕ್ಕೆ ಗಂಡ, ಮಗಳು, ಮೈದುನನ ಸಾಥ್ ಕೂಡ ಸಿಕ್ಕಿದೆ. ಇವೆಲ್ಲದರ ಜತೆಗೆ ತನ್ನ ಕಷ್ಟಕಾಲದಲ್ಲಿ ನೆರೆವಾದ ಶ್ಲೋಕ ಕ್ಲಾಸ್ ಮೇಡಂ ಶ್ರೀ ವಿದ್ಯಾ ರಾಮಕೃಷ್ಣನ್ ಅವರನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ.
ಆತ್ಮವಿಶ್ವಾಸವಿದ್ದರೆ ಎಂಥ ಕಷ್ಟದ ಪರಿಸ್ಥಿತಿ ನಿಭಾಯಿಸಿಕೊಂಡು ಹೋಗಬಹುದು. ಬದುಕುವುದಕ್ಕೆ ನೂರಾರು ದಾರಿ ಇದೆ ಅದನ್ನು ಸರಿಯಾಗಿ ಆರಿಸಿಕೊಳ್ಳುವ ಕೌಶಲ ನಮ್ಮಲ್ಲಿರಬೇಕು ಎನ್ನುತ್ತಾರೆ ಛಾಯಾ ಮಹಾಲೆ.
ಛಾಯಾ ಮಹಾಲೆ ಅವರು ತಯಾರಿಸಿದ ಬ್ಯಾಗ್, ಪೌಚ್, ಸೀರೆ ಕವರ್ ಗಳು ನಿಮಗೆ ಬೇಕಿದ್ದರೆ ಸಂಪರ್ಕಿಸಿ :9945382782. ಹಾಗೇ ಫೇಸ್ ಬುಕ್ ನಲ್ಲಿ Shantheri Fashion House ಎಂದು ಹುಡುಕಿದರೆ ಅಲ್ಲಿ ಅವರು ಹೊಲಿದ ನಾನಾ ಬಗೆಯ ಬ್ಯಾಗ್ ಗಳನ್ನು ನೋಡಬಹುದು.
ಪವಿತ್ರಾ ರಾಘವೇಂದ್ರ ಶೆಟ್ಟಿ