ಈಗ ಎಲ್ಲರದ್ದು ಒಂದು ರೀತಿಯ ಧಾವಂತದ ಬದುಕು. ಎಲ್ಲವೂ ಬೇಗನೆ ಆಗಬೇಕು ಎಂಬ ಮನಸ್ಥಿತಿ. ಜತೆಗೆ ಒಬ್ಬರಿಗೆ ಒಬ್ಬರು ಸಮಯ ಕೊಡುವುದಕ್ಕೂ ಹಿಂದೆ ಮುಂದೆ ನೋಡಬೇಕಾದ ಪರಿಸ್ಥಿತಿ. ಮನೆಯಲ್ಲಿ ಮಕ್ಕಳಿದ್ದರೂ ಕೆಲಸದ ಗಡಿಬಿಡಿಯಲ್ಲಿ ಅವರಿಗೆ ಸರಿಯಾಗಿ ಸಮಯ ಕೊಡುವುದಕ್ಕೆ ಆಗುವುದಿಲ್ಲ. ಹಾಗೇ ಗಂಡ-ಹೆಂಡತಿಯರ ನಡುವೆ ಕೂಡ ಈ ಸಮಯದ ಅಭಾವ ಸಾಕಷ್ಟು ಜಗಳವನ್ನು ತಂದು ಹಾಕುತ್ತದೆ ಎನ್ನಬಹುದು.
ಸರಿಯಾಗಿ ಸಮಯದ ನಿರ್ವಹಣೆ ಮಾಡುವುದನ್ನು ಕಲಿತರೆ ಅರ್ಧ ಸಮಸ್ಯೆ ನಿವಾರಣೆಯಾಗುತ್ತದೆ. ಯಾವ ಕೆಲಸ ಎಷ್ಟೊತ್ತಿಗೆ ಮಾಡಿ ಮುಗಿಸಬೇಕು ಎಂಬ ಪಟ್ಟಿಯೊಂದನ್ನು ಹಾಕಿಕೊಳ್ಳಿ. ಮೊದ ಮೊದಲು ಕಷ್ಟವೆನಿಸಬಹುದು. ಕೊನೆಗೆ ಅದು ಅಭ್ಯಾಸವಾಗುತ್ತದೆ.
ಅನಗತ್ಯ ಹರಟೆ ಕಡಿಮೆ ಮಾಡಿ. ಮಾಡುವ ಕೆಲಸ ಬಿಟ್ಟು ಕೆಲವರು ಫೋನ್ ನಲ್ಲಿಯೋ ಅಥವಾ ಪಕ್ಕದ ಮನೆಯವರ ಜತೆಯೋ ಗಂಟೆ ಗಟ್ಟಲೆ ಹರಟುತ್ತಾರೆ. ಆಗ ಕೆಲಸ ಉಳಿದುಬಿಡುತ್ತದೆ. ಮತ್ತೆ ಗಡಿಬಿಡಿ ಮಾಡಿಕೊಂಡು ಎಲ್ಲರ ಮೇಲೂ ಸಿಟ್ಟು ಮಾಡಿಕೊಳ್ಳುವ ಸ್ಥಿತಿ ಉಂಟಾಗುತ್ತದೆ. ಹಾಗಾಗಿ ಜಾಣತನದಿಂದ ಇದನ್ನು ನಿಭಾಯಿಸುವುದನ್ನು ಕಲಿಯಿರಿ.
ಇನ್ನು ಗಂಡ, ಮಕ್ಕಳ ಜತೆ ಬೆರೆಯುವುದಕ್ಕೆಂದು ಒಂದಷ್ಟು ಸಮಯ ಮೀಸಲಿಡಿ. ಇದರಿಂದ ಕುಟುಂಬದ ಬಾಂಧವ್ಯ ಗಟ್ಟಿಯಾಗುತ್ತದೆ. ಕೆಲಸದ ಹೊರೆ ಜಾಸ್ತಿ ಇದ್ದಾಗ ಅವರೊಂದಿಗೆ ಹೇಳಿಕೊಂಡು ಸಹಾಯ ಪಡೆದುಕೊಳ್ಳಿ. ಆಗ ಅವರಿಗೂ ನಿಮ್ಮ ಕಷ್ಟ ಅರ್ಥವಾಗುತ್ತದೆ.