ಕಿವಿಯೋಲೆಯಲ್ಲಿ ದಿನಕ್ಕೊಂದು ಫ್ಯಾಶನ್ ಬರುತ್ತಿರುತ್ತದೆ. ಅಜ್ಜಿಯಂದಿರು ತೊಡುತ್ತಿದ್ದ ಜುಮುಕಿ ಈಗ ಮತ್ತೆ ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ದಾಳಿ ಇಟ್ಟಿದೆ. ಅದರ ಸೊಬಗಿಗೆ ಮಾರು ಹೋಗದವರಾದರೂ ಯಾರು? ಇಂದು ಲಭ್ಯವಿರುವ ನವಿಲು ಗರಿ, ಉದ್ದದ ಎಲೆಯ ಆಕಾರ, ಹೂವಿನ ಆಕಾರದ ಓಲೆಗಳು ಆಭರಣ ಪ್ರಿಯರ ಕಿವಿಗಳಲ್ಲಿ ನೇತಾಡುತ್ತಿವೆ.
ಆಯ್ಕೆಯಲ್ಲಿ ಎಚ್ಚರವಿರಲಿ: ಮಳಿಗೆಯಲ್ಲಿ ಕಾಣುವ ಎಲ್ಲವೂ ನಿಮ್ಮ ಕಿವಿಗೆ ಹೊಂದಿಕೊಳ್ಳುತ್ತದೆ ಎಂದು ಭಾವಿಸಬೇಡಿ. ನಿಮ್ಮ ದೇಹಾಕಾರ, ಕೂದಲ ವಿನ್ಯಾಸ, ಬಣ್ಣ ಇವುಗಳಿಗೆ ಹೊಂದಿಕೊಳ್ಳುವಂತ ಓಲೆಗಳನ್ನೇ ಆಯ್ದುಕೊಳ್ಳಿ.
ಆಯಾ ಕಾರ್ಯಕ್ರಮವನ್ನು ಆಧರಿಸಿ ಅದಕ್ಕೆ ತಕ್ಕಂತ ಓಲೆಗಳನ್ನೇ ಧರಿಸಿ. ಅಂದರೆ ಪಾರ್ಟಿ ಮೊದಲಾದ ಫಂಕ್ಷನ್ ಗಳಿಗೆ ಟ್ರೆಂಡಿಯಾಗಿರುವ ಫ್ಯಾನ್ಸಿ ಓಲೆಗಳನ್ನು, ಮದುವೆ ಮುಂತಾದ ಶುಭ ಸಮಾರಂಭಗಳಿಗೆ ಜುಮುಕಿಯಂತ ಸಾಂಪ್ರದಾಯಿಕ ಓಲೆಗಳನ್ನು ಧರಿಸಿ. ಇದು ನಿಮ್ಮ ಆಕರ್ಷಣೆಯನ್ನು ಹೆಚ್ಚಿಸುತ್ತದೆ.
ಗುಂಡಗಿನ ಮುಖದವರಿಗೆ ಉರುಟಾಗಿರುವ ಕಿವಿಯೋಲೆ ಒಪ್ಪಿದರೆ ಚಿಕ್ಕ ಮುಖದವರು ಚಿಕ್ಕ ಓಲೆಗಳನ್ನೇ ಧರಿಸುವುದು ಚಂದ. ದೊಡ್ಡ ರಿಂಗು ಅಥವಾ ಓಲೆ ಮುಖಕ್ಕೆ ಒಪ್ಪುವುದಿಲ್ಲ. ಉದ್ದದ ಮುಖದವರು ದುಂಡಗಿನ ಓಲೆ, ಪುಟ್ಟ ಹ್ಯಾಂಗಿಂಗ್ ಧರಿಸುವುದು ಸೂಕ್ತ.
ಉದ್ದದ ಹ್ಯಾಂಗಿಂಗ್ಸ್ ಅವರ ಮುಖವನ್ನು ಮತ್ತಷ್ಟು ಉದ್ದವಾಗಿ ಕಾಣುವಂತೆ ಮಾಡುತ್ತದೆ. ಮೊಟ್ಟೆಯಾಕಾರದ ಮುಖ ಹೊಂದಿದ್ದವರು ಯಾವುದೆ ವಿನ್ಯಾಸದ ಓಲೆಯನ್ನು ಧರಿಸಿದರೂ ಸೊಗಸಾಗಿ ಕಾಣಿಸುತ್ತಾರೆ.