ಹೆಚ್ಚು ಧೂಳಿಗೆ ಓಡಾಡಿದಾಗ, ಹೆಚ್ಚು ಹೊತ್ತು ತಲೆ ಒದ್ದೆಯಾಗಿದ್ದಾಗ ಅಥವಾ ಸ್ನಾನ ಮಾಡುವಾಗ ಕಿವಿಯೊಳಗೆ ನೀರು ಹೋದರೆ ವ್ಯಾಕ್ಸ್ ತುಂಬಿಕೊಂಡು ಕಿವಿ ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಅಲ್ಲಿ ತುರಿಕೆ ಉಂಟಾಗಿ ನಾವು ಏನೇನನ್ನೋ ಕಿವಿಯೊಳಗೆ ತುರುಕಿಸಿಕೊಂಡು ನೋವು ಹೆಚ್ಚಿಸಿಕೊಂಡು ಬವಣೆ ಪಡುತ್ತೇವೆ.
ಇದರಿಂದ ಕಿವಿ ನೋವು ಹೆಚ್ಚುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ಅದರ ಬದಲು ಹೀಗೆ ಕಿವಿ ಸಂಬಂಧಿ ಸಮಸ್ಯೆ ಇರುವವರು ಕಡ್ಡಾಯವಾಗಿ ಕಿವಿಗೆ ಹತ್ತಿಯನ್ನು ಇಟ್ಟೇ ತಲೆ ಸ್ನಾನ ಮಾಡಿ. ಸ್ವಿಮ್ಮಿಂಗ್ ಫೂಲ್ ಗೆ ಇಳಿಯುವ ಮುನ್ನ ಕಡ್ಡಾಯವಾಗಿ ಕಿವಿ ಮುಚ್ಚಿಕೊಳ್ಳಿ.
ಹೀಗಿದ್ದೂ ಕಿವಿಯಲ್ಲಿ ವ್ಯಾಕ್ಸ್ ತುಂಬಿಕೊಂಡರೆ ಹೀಗೆ ಮಾಡಿ. ಅಡುಗೆ ಸೋಡಾವನ್ನು ನೀರಿನಲ್ಲಿ ಕದಡಿಸಿ ಎರಡು ಹನಿಯನ್ನು ಕಿವಿಯೊಳಗೆ ಬಿಡಿ. ಇದರಿಂದ ಕಿವಿಯಿಂದ ವಾಸನೆ ಬರುವುದು ನಿಲ್ಲುತ್ತದೆ ಹಾಗೂ ವ್ಯಾಕ್ಸ್ ಸಮಸ್ಯೆ ದೂರವಾಗುತ್ತದೆ. ಬೆಳ್ಳುಳ್ಳಿ ಎಣ್ಣೆಯಿಂದಲೂ ಇದೇ ಪ್ರಯೋಜನವನವನ್ನು ಪಡೆಯಬಹುದು.
ಕಿವಿಯ ಕೊಳಕು ತೆಗೆದು ಹಾಕಲು ಹೈಡ್ರೋಜನ್ ಪೆರಾಕ್ಸೈಡ್ ಸಾಮಾನ್ಯವಾಗಿ ಬಳಸುತ್ತಾರೆ. ಇದರಿಂದ ನಿಮ್ಮ ಕಿವಿಯಲ್ಲಿ ಗುಳ್ಳೆಗಳು ಕಾಣಿಸಿಕೊಂಡಾವು. ಹಾಗಾಗಿ ಇದನ್ನು ಬಳಸುವ ಮುನ್ನ ಎಚ್ಚರವಿರಲಿ.
ಕಿವಿ ದೇಹದ ಸೂಕ್ಷ್ಮ ಭಾಗಗಳಲ್ಲಿ ಒಂದಾದ್ದರಿಂದ ಪ್ರಯೋಗಕ್ಕೆ ಮುಂದಾಗುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು.