alex Certify ಕಿರುತೆರೆಯಿಂದ ನಟ ಅನಿರುದ್ಧಗೆ 2 ವರ್ಷ ನಿಷೇಧ; ತಮ್ಮ ವಿರುದ್ಧದ ಆರೋಪಗಳಿಗೆ ಸ್ಪಷ್ಟನೆ ನೀಡಿದ ’ಆರ್ಯವರ್ಧನ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಿರುತೆರೆಯಿಂದ ನಟ ಅನಿರುದ್ಧಗೆ 2 ವರ್ಷ ನಿಷೇಧ; ತಮ್ಮ ವಿರುದ್ಧದ ಆರೋಪಗಳಿಗೆ ಸ್ಪಷ್ಟನೆ ನೀಡಿದ ’ಆರ್ಯವರ್ಧನ್’

ಬೆಂಗಳೂರು; ಕನ್ನಡದ ಜನಪ್ರಿಯ ಧಾರಾವಾಹಿ ಜೊತೆಜೊತೆಯಲಿ ಸಿರಿಯಲ್ ನ ನಾಯಕ ನಟ ಅನಿರುದ್ಧ ಹಾಗೂ ನಿರ್ಮಾಪಕ, ಸಂಚಿಕೆ ನಿರ್ದೇಶಕರ ನಡುವಿನ ಮನಸ್ಥಾಪ ತಾರಕ್ಕೇರಿದ್ದು, ಇದೀಗ ಅನಿರುದ್ಧ ಅವರನ್ನು ಎರಡು ವರ್ಷಗಳ ಕಾಲ ಕಿರುತೆರೆಯಿಂದ ನಿಷೇಧ ಮಾಡಿ ಆದೇಶ ಹೊರಡಿಸಲಾಗಿದೆ.

ಈ ಕುರಿತು ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್, ಅನಿರುದ್ಧ ಅವರನ್ನು ಬ್ಯಾನ್ ಮಾಡುತ್ತಿಲ್ಲ. ಆದರೆ ಎರಡು ವರ್ಷಗಳ ಕಾಲ ಅವರನ್ನು ಕಿರುತೆರೆಯಿಂದ ದೂರ ಇಡುತ್ತಿದ್ದೇವೆ. ಸ್ಕ್ರಿಪ್ಟ್ ವಿಚಾರವಾಗಿ ಸಂಚಿಕೆ ನಿರ್ದೇಶಕ ಮಧು ಉತ್ತಮ್ ಅವರಿಗೆ ಮೂರ್ಖ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅಲ್ಲದೇ ಶೂಟಿಂಗ್ ಅರ್ಧಕ್ಕೆ ಬಿಟ್ಟು ಹೊರ ನಡೆದಿದ್ದಾರೆ. ಈ ಎಲ್ಲಾ ಕಾರಣಗಳಿಂದ ಅವರನ್ನು ಸೀರಿಯಲ್ ನಿಂದ ಹೊರ ಹಾಕಲಾಗಿದೆ. 2 ವರ್ಷಗಳ ಕಾಲ ಅವರು ಯಾವುದೇ ಸೀರಿಯಲ್, ಶೂಟಿಂಗ್ ನಲ್ಲಿ ತೊಡಗಿಸಿಕೊಳ್ಳುವಂತಿಲ್ಲ ಎಂದರು.

ತಮ್ಮ ವಿರುದ್ಧ ಆರೋಪಗಳಿಗೆ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿರುವ ನಟ ಅನಿರುದ್ಧ, ನಾನು ಗೆಲ್ಲುವುದಲ್ಲ, ಪ್ರಾಜಕ್ಟ್ ಗೆಲ್ಲಬೇಕು. ಸ್ಕ್ರಿಪ್ಟ್ ವಿಚಾರವಾಗಿ ನಾನು ಕೋಪಗೊಂಡಿದ್ದು ನಿಜ. ಸ್ಕ್ರಿಪ್ಟ್ ಕೊನೇ ಗಳಿಗೆಯಲ್ಲಿ ಕೊಟ್ಟಿದ್ದಕ್ಕೆ ನನಗೆ ಸಿಟ್ಟು ಬಂದಿದೆ. ಸಂಚಿಕೆ ನಿರ್ದೇಶಕರಿಗೆ ನಾನು ಬೈದಿದ್ದು ನಿಜ. ಆದರೆ ಅವರನ್ನು ಮೂರ್ಖ ಎಂದಿಲ್ಲ. ನಾವೆಲ್ಲ ಯಾವತ್ತೂ ಮೂರ್ಖತನದ ಕೆಲಸ ಮಾಡಬಾರದು ಎಂದು ಹೇಳಿದ್ದೇ ಅಷ್ಟೇ. ಮಧು ಉತ್ತಮ್ ಅವರಿಗೆ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ, ನೀವು ಬೆಳೆಯಬೇಕು, ನಿಮಗೆ ಒಳ್ಳೆಯದಾಗಲಿ ಎಂಬುದು ನನ್ನ ಹಾರೈಕೆ ಎಂದರು.

ಇನ್ನು ಕ್ಯಾರಾವಾನ್ ಬೇಕು ಎಂದು ಹೇಳಲು ಬಲವಾದ ಕಾರಣಗಳಿವೆ. ಶೂಟಿಂಗಾಗಿ ಹೊರಗಡೆ ಹೋದಾಗ ಹೆಣ್ಣುಮಕ್ಕಳು-ಗಂಡುಮಕ್ಕಳು ವಾಷ್ ರೂಮಿಗೆ ಹೋಗಲು ಕಷ್ಟವಾಗುತ್ತಿತ್ತು. ಬೆಟ್ಟಕ್ಕೆ ಹೋಗಲು ಆಗುತ್ತಿರಲಿಲ್ಲ, ಇನ್ಯಾರದ್ದೋ ಮನೆಗೆ ಹೋಗಲು ಆಗುತ್ತಿರಲಿಲ್ಲ. ಹಾಗಾಗಿ ಕ್ಯಾರಾವಾನ್ ಬೇಕು ಎಂದು ಹೇಳಿದ್ದೆ. ಆನಂತರದಲ್ಲಿ ಕ್ಯಾರಾವಾನ್ ಬಂತು. ಅದರಿಂದ ಮಹಿಳಾ ಕಲಾವಿದರು ಕೂಡ ನಿಮ್ಮಿಂದ ಅನುಕೂಲವಾಯಿತು ಎಂದು ಸಂತೋಷಪಟ್ಟರು ಎಂದು ವಿವರಿಸಿದರು.

ಇನ್ನು ಧಾರಾವಾಹಿಯ ಮೂರು ಸೀನ್ ಗಳನ್ನು ಸರಿಪಡಿಸಲು ಹೇಳಿದ್ದೆ. ಅದರರಿಂದ ಒಳ್ಳೆಯದೇ ಆಯಿತು. ಆರಂಭದಲ್ಲಿ ಆರ್ಯವರ್ಧನ್ ಪಾತ್ರ ನಕಾರಾತ್ಮಕ ಪಾತ್ರ ಅಲ್ಲ ಎಂದಿದ್ದರು. ಕಲಾವಿದನಿಗೆ ಬೇರೆ ಆಯಾಮಗಳಿರುತ್ತವೆ ಎಂದಿದ್ದರು. ಅದಕ್ಕೆ ನಾನು ತಕರಾರು ಮಾಡಿಲ್ಲ. ಒಂದುವರೆ ವರ್ಷ ಕಾಲ ಹಗಲು-ರಾತ್ರಿ ದುಡಿದಿದ್ದೇನೆ. ನನ್ನ ಊಟ, ತಿಂಡಿ ಎಲ್ಲವನ್ನೂ ನಾನು ಮನೆಯಿಂದಲೇ ತೆಗೆದುಕೊಂಡು ಹೋಗುತ್ತಿದ್ದೆ. ಆದರೆ ಒತ್ತಡದಲ್ಲಿ ಕೆಲಸ ಮಾಡು ಈ ಸೀನ್ ಮುಗಿಸಿಯೇ ಹೋಗಬೇಕು ಎಂದು ಪ್ರತಿಬಾರಿ ಹೇಳುವುದು ಸರಿಯಲ್ಲ. ಕೆಲವೊಮ್ಮೆ ಅನಿವಾರ್ಯವಿದ್ದಾಗ ಮಾಡಬಹುದು. ಆದರೆ ಪ್ರತಿಬಾರಿ ಶೂಟಿಂಗ್ ಸೆಟ್ ನಲ್ಲಿ ಒತ್ತಡದ ವಾತಾವರಣ ತಂದು ಎಲ್ಲರ ಮೇಲೂ ರೇಗಾಡುತ್ತ ಟೆನ್ಶನ್ ನಲ್ಲಿ ಕೆಲಸ ಮಾಡಿಸುವ ಬದಲು ಮಾಡುವ ಕೆಲಸವನ್ನು ಎಲ್ಲರೂ ಆರಾಮವಾಗಿ, ಶ್ರದ್ಧೆಯಿಂದ ಮಾಡಿಕೊಂಡು ಹೋಗಬಹುದಲ್ಲಾ ಎಂಬುದು ನನ್ನ ಅಭಿಪ್ರಾಯ.

ಈ ಬಗ್ಗೆ ನಾನು ಸಾಕಷ್ಟು ಸಲ ಹೇಳಿದ್ದು ನಿಜ. ಒತ್ತಡದಲ್ಲಿ, ಭಯ ಹುಟ್ಟಿಸಿ ಕೆಲಸ ತೆಗೆದರೆ ಕಲಾವಿದರಿಗಾಗಲಿ ಯಾರಿಗೇ ಆಗಲಿ ಕೆಲಸ ಮಾಡುವುದು ಕಷ್ಟವಾಗುತ್ತದೆ. ನಿನ್ನೆಯಿಂದ ನಾನು ಮೆಂಟಲಿ ಬಹಳ ಸ್ಟ್ರೆಸ್ ನಲ್ಲಿದ್ದೇನೆ. ಇರುವ ವಿಷಯವನ್ನು ಹೊರ ಬಂದು ಹೇಳಬೇಕಾದ ಅನಿವಾರ್ಯತೆ ಎನಿಸಿತು ಎಂದು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...