ನಾರಿ ಮುನಿದರೆ ಮಾರಿ ಎಂಬ ಗಾದೆ ಮಾತಿದೆ. ಈ ಮಾತಿಗೆ ಪೂರಕವೆಂಬತೆ, ಇದೀಗ ಮಹಿಳೆಯೊಬ್ಬರು ತನಗೆ ಕಿರುಕುಳ ನೀಡಿದ್ದಕ್ಕಾಗಿ ವ್ಯಕ್ತಿಯನ್ನು ಥಳಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಝಾನ್ಸಿಯ ಗುರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹೆವತ್ಪುರದಲ್ಲಿ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ವ್ಯಕ್ತಿಯೊಬ್ಬ ಮಹಿಳೆಗೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಇದರಿಂದ ಸಿಟ್ಟಿಗೆದ್ದ ಮಹಿಳೆ ತಕ್ಕ ಶಾಸ್ತಿ ಮಾಡಿದ್ದಾಳೆ.
ಕಿರುಕುಳದಿಂದ ಕ್ರೋಧಗೊಂಡ ಮಹಿಳೆ ತನ್ನ ಕಾಲಿನಲ್ಲಿದ್ದ ಚಪ್ಪಲಿಯನ್ನು ತೆಗೆದು ಸಾರ್ವಜನಿಕವಾಗಿ ಆತನನ್ನು ಥಳಿಸಿದ್ದಾಳೆ. ಗಲಾಟೆಯನ್ನು ನೋಡಿದ ಗ್ರಾಮಸ್ಥರ ಗುಂಪು ಘಟನಾ ಸ್ಥಳಕ್ಕೆ ಬಂದು ಆತನಿಗೆ ಹಿಗ್ಗಾಮುಗ್ಗಾ ಝಾಡಿಸಿದ್ದಾರೆ. ಇದೇ ವೇಳೆ ಅಕ್ಕಪಕ್ಕದಲ್ಲಿದ್ದ ಅನೇಕರು ಘಟನೆಯನ್ನು ತಮ್ಮ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಹಿಳೆಯನ್ನು ಶ್ಲಾಘಿಸಿದ್ದಾರೆ.
ಇನ್ನು ಈ ವಿಡಿಯೋ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಘಟನೆಯ ಕುರಿತು ಮಾತನಾಡಿದ ಎಸ್ಪಿ ದೇಹತ್ ನೇಪಾಲ್ ಸಿಂಗ್, ವಿಡಿಯೋ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಹಾಗೂ ವಿಷಯದ ಕುರಿತಾಗಿ ಕೂಲಂಕಷವಾಗಿ ಪರಿಶೀಲಿಸಲಾಗುವುದು ಎಂದು ಹೇಳಿದ್ದಾರೆ.