ಪ್ರಕರಣವೊಂದರಲ್ಲಿ ರಾಜ್ಯ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಪತಿ ಹಾಗೂ ಆತನ ಮನೆಯವರ ಕಿರುಕುಳದಿಂದ ಬೇಸತ್ತು ಪತ್ನಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರೂ ಸಹ ಆಕೆ ಜೀವನಾಂಶ ಪಡೆಯಲು ಅರ್ಹರು ಎಂದು ಸ್ಪಷ್ಟಪಡಿಸಿದೆ.
ಪ್ರಕರಣದ ವಿವರ: 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಪತಿ – ಪತ್ನಿ ನಂತರ ಕೆಲವೇ ವರ್ಷಗಳಲ್ಲಿ ಬೇರ್ಪಟ್ಟಿದ್ದು, ಪತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಪತ್ನಿ ನಂತರ ಜೀವನಾಂಶ ಕೋರಿ ದೊಡ್ಡಬಳ್ಳಾಪುರ ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಇದನ್ನು ಪ್ರಶ್ನಿಸಿ ಆಕೆಯ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ತನ್ನ ಪತ್ನಿ ಸ್ವಇಚ್ಛೆಯಿಂದ ಮನೆ ತೊರೆದಿರುವ ಕಾರಣ ಆಕೆಗೆ ಜೀವನಾಂಶ ನೀಡಲು ಸಾಧ್ಯವಿಲ್ಲ ಎಂಬುದು ಪತಿಯ ವಾದವಾಗಿತ್ತು. ಈ ಪ್ರಕರಣದ ವಾದ – ವಿವಾದ ಆಲಿಸಿದ ಹೈಕೋರ್ಟ್ ನ್ಯಾಯಪೀಠ ಇದೀಗ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಪತ್ನಿ, ತಮ್ಮ ಗಂಡನ ಮನೆಯಲ್ಲಿ ನೀಡುತ್ತಿದ್ದ ಕಿರುಕುಳ ಹಾಗೂ ಅತ್ತೆಯ ಒತ್ತಾಯದಿಂದಲೇ ಪತಿ ನನ್ನನ್ನು ಮನೆಯಿಂದ ಹೊರಹಾಕಿದ್ದರು ಎಂಬುದನ್ನು ಜೀವನಾಂಶ ಕೋರಿ ಸಲ್ಲಿಸಿದ್ದ ಅರ್ಜಿಯಲ್ಲಿ ಸ್ಪಷ್ಟವಾಗಿ ತಿಳಿಸಿದ್ದು, ಹೀಗಾಗಿ ನಾನು ಬೇರೊಂದು ಮನೆಯಲ್ಲಿ ವಾಸಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಹೀಗಾಗಿ ಪರಸ್ಪರ ಒಪ್ಪಂದದ ಮೇರೆಗೆ ಆಕೆ ಬೇರೊಂದು ಮನೆಯಲ್ಲಿ ವಾಸ ಮಾಡುತ್ತಿದ್ದಾರೆ ಎಂಬ ಪತಿಯ ವಾದವನ್ನು ಒಪ್ಪಲಾಗದು ಎಂದು ನ್ಯಾಯಪೀಠ ಹೇಳಿದೆ. ಹೀಗಾಗಿ ಪ್ರತ್ಯೇಕ ವಾಸವಾಗಿದ್ದರೂ ಪತ್ನಿ ಜೀವನಾಂಶಕ್ಕೆ ಅರ್ಹಳು ಎಂದು ನ್ಯಾಯಪೀಠ ತಿಳಿಸಿದೆ.