ಬುಧವಾರದಂದು ನಡೆದ ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ತ್ರಿವೇಣಿ ಆಯ್ಕೆಯಾಗಿದ್ದಾರೆ. 23 ವರ್ಷದ ತ್ರಿವೇಣಿ ಈ ಮೂಲಕ ಮೇಯರ್ ಆಗಿ ಆಯ್ಕೆಯಾದ ಅತಿ ಕಿರಿಯ ವಯಸ್ಸಿನವರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅವರು ಮೇಯರ್ ಆಗಿ ಆಯ್ಕೆಯಾದ ದಿನದಂದೇ ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿರುವುದರಿಂದ ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಗೆ ಬಂದಿದೆ. ಹೀಗಾಗಿ ತ್ರಿವೇಣಿ ಮೇಯರ್ ಆದರೂ ಸಹ ನೀತಿ ಸಂಹಿತೆ ಮುಗಿಯುವವರೆಗೆ ಸರ್ಕಾರಿ ಕಾರು ಬಳಸುವಂತಿಲ್ಲ.
ಪ್ಯಾರಾ ಮೆಡಿಕಲ್ ಪದವೀಧರರಾಗಿರುವ ತ್ರಿವೇಣಿ ತಮ್ಮ 21ನೇ ವಯಸ್ಸಿನಲ್ಲೇ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ದಾಖಲೆ ಬರೆದಿದ್ದರು. ಇದೀಗ ಮೇಯರ್ ಆಗಿರುವ ಅವರು, ಅಧಿಕಾರಾವಧಿಯಲ್ಲಿ ತಮ್ಮ ಛಾಪು ಮೂಡಿಸಲು ನೀತಿ ಸಂಹಿತೆ ಮುಗಿಯುವವರೆಗೆ ಕಾಯಬೇಕಿದೆ.