ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ ಕಿಮ್ಮನೆ ರತ್ನಾಕರ್ ಹಾಗೂ ಆರ್.ಎಂ. ಮಂಜುನಾಥ್ ಗೌಡ ನಡುವೆ ಪೈಪೋಟಿ ನಡೆದಿದ್ದು, ಶನಿವಾರದಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಉಭಯ ನಾಯಕರನ್ನೂ ಕರೆಯಿಸಿಕೊಂಡು ಚರ್ಚೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಒಬ್ಬರಿಗೆ ವಿಧಾನಸಭೆ ಟಿಕೆಟ್ ನೀಡಿದರೆ ಮತ್ತೊಬ್ಬರಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಲಾಗುವುದು. ಹೀಗಾಗಿ ತೀರ್ಥಹಳ್ಳಿ ಕ್ಷೇತ್ರಕ್ಕೆ ಯಾರಿಗೇ ಟಿಕೆಟ್ ಸಿಕ್ಕಿದರೂ ಸಹ ಒಟ್ಟಾಗಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ಶಿವಕುಮಾರ್ ಇಬ್ಬರೂ ನಾಯಕರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಕಿಮ್ಮನೆ ರತ್ನಾಕರ್ ಅವರಿಗೆ ಈ ಬಾರಿಯೂ ಟಿಕೆಟ್ ನೀಡಲು ಪಕ್ಷದ ವರಿಷ್ಠರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದ್ದು, ಮಂಜುನಾಥ್ ಗೌಡರಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವ ಭರವಸೆ ನೀಡುವ ಸಾಧ್ಯತೆ ಇದೆ. ಈ ಇಬ್ಬರು ನಾಯಕರು ಒಟ್ಟಾಗಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡರೆ ಗೆಲುವು ಸುಲಭ ಎಂಬುದು ವರಿಷ್ಠರ ಲೆಕ್ಕಾಚಾರವಾಗಿದೆ.