ಮಳೆಗಾಲ ಶುರುವಾದರೆ ಸಾಕು ರಸ್ತೆಗಳ ಅವತಾರ ಒಂದೊಂದಾಗಿ ಬಟಾಬಯಲು ಆಗ್ತಾ ಹೋಗುತ್ತೆ. ಕಿತ್ತು ಹೋಗಿರೋ ರಸ್ತೆಯಲ್ಲಿ ವಾಹನ ಓಡಿಸುವುದೇ ಒಂದು ಸಾಹಸ. ಎಷ್ಟೊ ಬಾರಿ ಹೊಂಡಗಳ ನಡುವೆ ಸರ್ಕಸ್ ಮಾಡ್ತಾ ವಾಹನ ಓಡಿಸುವಾಗ ಬಿದ್ದು ಸಾವನ್ನಪ್ಪಿರೋ ಘಟನೆಗಳು ನಡೆದಿವೆ.
ಆದರೂ ಸರ್ಕಾರ ಎಚ್ಚೆತ್ತುಕೊಳ್ಳದೇ ಇರುವುದು ವಿಪರ್ಯಾಸ. ಇದೇ ಕಾರಣಕ್ಕೆ ಸರ್ಕಾರಕ್ಕೆ ಬಿಸಿ ತಟ್ಟಿಸಬೇಕು ಅಂತ ಮಧ್ಯಪ್ರದೇಶದ ಅನೂಪಪುರದ ಜನ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ.
ರಸ್ತೆಯ ನಟ್ಟನಡುವೆ ಹೊಂಡವೊಂದು ಬಿದ್ದಿರುತ್ತೆ. ಅಲ್ಲಿ ವಾಹನಗಳು ಓಡಾಡೋದು ಇರಲಿ, ಮನುಷ್ಯರು ಕೂಡಾ ಓಡಾಡೋದಕ್ಕೆ ಸಾಧ್ಯವಿರಲಿಲ್ಲ. ಆದ್ದರಿಂದ ಸ್ಥಳೀಯರು ಆ ಹೊಂಡದಲ್ಲಿ ನೀರನ್ನ ತುಂಬಿ, ಗಾಗಲ್ ಹಾಕಿಕೊಂಡು, ಅದರಲ್ಲಿ ಕುರ್ಚಿ ಇಟ್ಟು ಕೂತು ಎಂಜಾಯ್ ಮಾಡ್ತಿದ್ದಾರೆ.
ಅದು ನೋಡೋದಕ್ಕೆ ಸೇಮ್ ಟು ಸೇಮ್ ಗೋವಾ ಬೀಚ್ ಸೀನ್ ಇದ್ದ ಹಾಗಿತ್ತು. ಗೋವಾದ ಬೀಚ್ ದಂಡೆಯಲ್ಲಿ ಜನರು ಹಾಡು ಹೇಳೋದು, ಡಾನ್ಸ್ ಮಾಡುವುದು ಮಾಡ್ತಾರೋ ಇಲ್ಲಿಯೂ ಕೂಡಾ ಅಂತಹದ್ದೇ ದೃಶ್ಯ ಕಂಡುಬಂದಿತ್ತು. ಅಸಲಿಗೆ ಇದು ಪ್ರತಿಭಟನೆಯಾಗಿತ್ತು.
ಅನೇಕ ವರ್ಷಗಳಿಂದ ಇಲ್ಲಿನ ಬಿಜುರಿ ನಗರ ಪಾಲಿಕೆ, ಕಪಿಲಧಾರಾ ರಸ್ತೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿತ್ತು. ಈಗಾಗಲೇ 5-6 ತಿಂಗಳಾದರೂ ಅಧಿಕಾರಿಗಳು ಯಾವುದೇ ಕ್ರಮಗಳನ್ನ ಕೈಗೊಂಡಿಲ್ಲ. ರಸ್ತೆ ಹದಗೆಟ್ಟಿದ್ದರೂ ಅಧಿಕಾರಿಗಳು ನಿರ್ಲಕ್ಷ ಮಾಡಿದ್ದಾರೆ. ಇದರ ಪರಿಣಾಮ ದೊಡ್ಡ ದೊಡ್ಡ ಹೊಂಡಗಳು ಬಿದ್ದಿವೆ. ಮಳೆಗಾಲದಲ್ಲಿ ಇದೇ ಹೊಂಡದಲ್ಲಿ ನೀರು, ಕೆಸರು ತುಂಬಿರುತ್ತೆ. ಇದರಿಂದ ಅನೇಕ ಸಮಸ್ಯೆಗಳು ಎದುರಿಸುವ ಹಾಗಾಗಿದೆ.
ಜನರ ಸಮಸ್ಯೆಗೆ ಸ್ಪಂದಿಸದ ನಗರ ಪಾಲಿಕೆಯನ್ನ ತರಾಟೆಗೆ ತೆಗೆದುಕೊಂಡ ಸ್ಥಳೀಯರು, ವಿಭಿನ್ನವಾಗಿ ಪ್ರತಿಭಟನೆ ಮಾಡಿದ್ದಾರೆ. ಇನ್ನಾದರೂ ನಗರ ಪಾಲಿಗೆ ಎಚ್ಚೆತ್ತುಕೊಂಡು ರಸ್ತೆ ದುರಸ್ತಿ ಕಾರ್ಯ ಮಾಡಲಿ ಅನ್ನುವುದೇ ಅವರ ಆಸೆ.
ಈ ಹಿಂದೆಯೂ ನಗರ ಪಾಲಿಕೆಗೆ ರಸ್ತೆ ದುರಸ್ತಿ ಬಗ್ಗೆ ದೂರು ಕೊಟ್ಟರು, ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಬಾರಿಯಂತೂ ರಸ್ತೆ ಪರಿಸ್ತಿತಿ ತುಂಬಾನೇ ಹದಗೆಟ್ಟಿದ್ದು ಮಳೆಗಾಲದಲ್ಲಿ ವಾಹನ ಓಡಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ನಗರ ಪಾಲಿಕೆ ಹೆಸರಿಗೆ ಟೆಂಡರ್ ಕರೆದಿದ್ದರೂ, ಇನ್ನುವರೆಗೂ ಕ್ರಮ ಕೈಗೊಂಡಿಲ್ಲ ಅನ್ನುವುದೇ ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.