ಸಾಮಾನ್ಯವಾಗಿ ಕಿತ್ತಳೆ ಹಣ್ಣು ತಿಂದು ಅದರ ಸಿಪ್ಪೆಯನ್ನು ಎಸೆಯುತ್ತೇವೆ. ಸಿಪ್ಪೆಯನ್ನು ಎಸೆಯುವ ಬದಲು ಸಿಪ್ಪೆಯಿಂದ ರುಚಿಯಾದ ಚಟ್ನಿ ಮಾಡಿ ಸವಿದು ನೋಡಿ.
ಬೇಕಾಗುವ ಸಾಮಗ್ರಿಗಳು:
ಕಿತ್ತಳೆ ಸಿಪ್ಪೆ, ತೆಂಗಿನತುರಿ, ದನಿಯಾ, ಬೆಲ್ಲ, ಹುಣಸೆಹಣ್ಣು, ಉಪ್ಪು, ಕೆಂಪು ಮೆಣಸು ಹಾಗೂ ಎಣ್ಣೆ.
ಮಾಡುವ ವಿಧಾನ:
ಕಿತ್ತಳೆ ಸಿಪ್ಪೆಯನ್ನು ಸಣ್ಣ ಸಣ್ಣ ಚೂರು ಮಾಡಿಕೊಂಡು, ಎಣ್ಣೆಯಲ್ಲಿ ಹುರಿದುಕೊಳ್ಳಬೇಕು (ಅಥವಾ ಸ್ವಲ್ಪ ನೀರು ಹಾಕಿ ಬೇಯಿಸಿಕೊಳ್ಳಬಹುದು). ಹುರಿದ ಕಿತ್ತಳೆ ಸಿಪ್ಪೆ, ತೆಂಗಿನತುರಿ, ಕೆಂಪು ಮೆಣಸು, ಸ್ವಲ್ಪ ದನಿಯಾ ಹಾಗೂ ಸ್ವಲ್ಪ ಹುಣಸೆಹಣ್ಣು ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಬೇಕು.
ನಂತರ ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಬೆಲ್ಲ (ಸಿಹಿ ಹೆಚ್ಚು ಇಷ್ಟಪಡುವವರು ಬೆಲ್ಲವನ್ನು ಹೆಚ್ಚಿನ ಪ್ರಮಾಣದಲ್ಲಿ ಹಾಕಿಕೊಳ್ಳಬಹುದು) ಹಾಕಿ ಚೆನ್ನಾಗಿ ಕುದಿಸಬೇಕು. ಈ ಚಟ್ನಿಯು ಅನ್ನದೊಂದಿಗೆ ಹಾಗೂ ನೀರು ದೋಸೆಯೊಂದಿಗೆ ಸವಿಯಲು ಚೆನ್ನಾಗಿರುತ್ತದೆ.