ರಾಜ್ಯ ಸೇರಿದಂತೆ ದೇಶದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ವಿಪರೀತ ಹೆಚ್ಚಳವಾಗುತ್ತಿದ್ದು, ಅಂದುಕೊಂಡಂತೆ ಹಾಗೂ ಘೋಷಿಸಿದಂತೆ ಸಿನಿಮಾಗಳು ಬಿಡುಗಡೆಯಾಗುವುದು ಅನುಮಾನ ಎನ್ನಲಾಗುತ್ತಿದೆ.
ಈ ಸಂದರ್ಭದಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರವನ್ನು ಇದೇ ಫೆ.24ರಂದು ವಿಶ್ವದಾದ್ಯಂತ ಬಿಡುಗಡೆ ಮಾಡಲಾಗುವುದು ಎಂದು ಚಿತ್ರ ತಂಡ ಘೋಷಿಸಿತ್ತು. ಆದರೆ, ಸದ್ಯದ ಪರಿಸ್ಥಿತಿ ನೋಡಿದರೆ, ಈ ಚಿತ್ರ ಬಿಡುಗಡೆಯಾಗುವುದು ಅನುಮಾನ ಎನ್ನಲಾಗುತ್ತಿದೆ. ಹೀಗಾಗಿ ಓಟಿಟಿ ಈ ಚಿತ್ರಕ್ಕೆ ದೊಡ್ಡ ಮೊತ್ತದ ಆಫರ್ ನೀಡಿದೆ ಎಂದು ತಿಳಿದು ಬಂದಿದೆ.
ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಸರ್ಕಾರ ಶೇ.50ರಷ್ಟು ಸೀಟು ಭರ್ತಿಯೊಂದಿಗೆ ಚಿತ್ರ ಮಂದಿರ ನಡೆಸಲು ಅವಕಾಶ ನೀಡಿದೆ. ಈ ಸಂದರ್ಭದಲ್ಲಿ ದೊಡ್ಡ ಬಜೆಟ್ ನ ಚಿತ್ರಗಳನ್ನು ಬಿಡುಗಡೆ ಮಾಡಿದರೆ, ಹೆಚ್ಚು ನಷ್ಟವಾಗುತ್ತದೆ ಎಂಬ ಕಾರಣಕ್ಕೆ ಹಲವು ಚಿತ್ರಗಳನ್ನು ಬಿಡುಗಡೆ ಮಾಡಲು ಹಿಂದೇಟು ಹಾಕಲಾಗುತ್ತಿದೆ. ಈ ಸಾಲಿನಲ್ಲಿ ವಿಕ್ರಾಂತ್ ರೋಣ ಕೂಡ ಬಂದು ನಿಂತಿದೆ.
ವಿಕ್ರಾಂತ್ ರೋಣ ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಿದರೆ ಬರೋಬ್ಬರಿ 100 ಕೋಟಿ ರೂಪಾಯಿ ನೀಡುವ ಆಫರ್ ನ್ನು ನೀಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಎರಡು ಒಟಿಟಿ ಸಂಸ್ಥೆಗಳ ನಡುವೆ ಸ್ಪರ್ಧೆ ನಡೆದಿದೆ ಎನ್ನಲಾಗುತ್ತಿದೆ. ಅಲ್ಲದೇ, ಚಿತ್ರವನ್ನು ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ನೇರವಾಗಿ ಪ್ರಸಾರ ಮಾಡಲು ಆಫರ್ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಇದು ದಾಖಲೆಯ ಆಫರ್ ಎನ್ನಲಾಗಿದ್ದು, ಇದು ದಕ್ಷಿಣ ಭಾರತದಲ್ಲಿಯೇ ಚಿತ್ರವೊಂದಕ್ಕೆ ಮಾಡಿರುವ ಅತೀ ದೊಡ್ಡ ಆಫರ್. ಆದರೆ, ಇದುವರೆಗೂ ಚಿತ್ರ ತಂಡ ಮಾತ್ರ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎನ್ನಲಾಗಿದೆ. ಈ ಚಿತ್ರವನ್ನು 3ಡಿ ತಂತ್ರಜ್ಞಾನದೊಂದಿಗೆ ಅದ್ದೂರಿಯಾಗಿ ಚಿತ್ರಿಸಲಾಗಿದೆ. ಹೀಗಾಗಿ ಹೆಚ್ಚಿನ ಆದಾಯದ ನಿರೀಕ್ಷೆ ಕೂಡ ಇದೆ. ಇನ್ನಷ್ಟು ದಿನಗಳು ಕಾದು ನೋಡುವ ತಂತ್ರದಲ್ಲಿ ನಿರ್ಮಾಪಕರು ಇದ್ದಾರೆ ಎನ್ನಲಾಗಿದೆ.
ಒಂದು ವೇಳೆ ಕೊರೊನಾ ಸೋಂಕಿತರ ಸಂಖ್ಯೆ ವಿಪರೀತ ಹೆಚ್ಚಳವಾಗಿ, ಲಾಕ್ ಡೌನ್ ನಂತಹ ಸ್ಥಿತಿ ಮುಂದುವರೆದರೆ, ಚಿತ್ರಮಂದಿರಗಳು ಮತ್ತೆ ಮೊದಲಿನಂತೆ ಶೇ.100ರಷ್ಟು ಸೀಟು ಭರ್ತಿಯೊಂದಿಗೆ ಪ್ರಾರಂಭವಾಗಲು ತುಂಬಾ ಸಮಯ ಹಿಡಿಯುತ್ತದೆ. ಹೀಗಾಗಿ ಸುದೀಪ್ ಅವರೊಂದಿಗೆ ಮಾತನಾಡಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ನಿರ್ಮಾಪಕ ಜಾಕ್ ಮಂಜು ಹೇಳಿದ್ದಾರೆ.