ಕಾಶಿಯಾತ್ರೆ ತೆರಳಲು ಬಯಸುವವರಿಗೆ ಭರ್ಜರಿ ಗುಡ್ ನ್ಯೂಸ್ ಒಂದು ಇಲ್ಲಿದೆ. ಚಳಿಗಾಲದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಮುಜರಾಯಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆ ‘ಕರ್ನಾಟಕ – ಭಾರತ್ ಗೌರವ್ ಕಾಶಿ ರೈಲು ಯಾತ್ರೆ’ ಪುನರಾರಂಭವಾಗುತ್ತಿದೆ.
ಈಗಾಗಲೇ ಎರಡು ತಂಡಗಳು ಈ ಯೋಜನೆ ಅಡಿ ಕಾಶಿ ಯಾತ್ರೆ ಪೂರ್ಣಗೊಳಿಸಿದ್ದು, ಯಾತ್ರೆ ಕೈಗೊಳ್ಳುವ ಓರ್ವ ವ್ಯಕ್ತಿಗೆ 20,000 ರೂಪಾಯಿ ವೆಚ್ಚವಾಗಲಿದ್ದರೆ ಈ ಪೈಕಿ ರಾಜ್ಯ ಸರ್ಕಾರ ಪ್ರತಿ ಯಾತ್ರಾರ್ಥಿಗೆ 5,000 ರೂಪಾಯಿಗಳ ಸಹಾಯಧನ ನೀಡುತ್ತದೆ. ಹೀಗಾಗಿ ಕೇವಲ 15 ಸಾವಿರ ರೂಪಾಯಿಗಳಲ್ಲಿ ಎಂಟು ದಿನದ ಕಾಶಿಯಾತ್ರೆ ಮಾಡಬಹುದಾಗಿದೆ.
ಚಳಿಗಾಲದ ಕಾರಣಕ್ಕೆ ಸ್ಥಗಿತಗೊಂಡಿದ್ದ ಕಾಶಿ ರೈಲು ಯಾತ್ರೆ, ಈಗ ಪುನರಾರಂಭವಾಗಿದ್ದು ಫೆಬ್ರವರಿ 21ರ ನಂತರ ಯಾತ್ರೆ ಆರಂಭಿಸಲು ನಿರ್ಧರಿಸಲಾಗಿದೆ. 14 ಬೋಗಿಗಳ ವಿಶೇಷ ರೈಲಿನಲ್ಲಿ ಒಟ್ಟು 540 ಮಂದಿ ಪ್ರಯಾಣ ಮಾಡಬಹುದಾಗಿದ್ದು, ಈಗಾಗಲೇ 300ಕ್ಕೂ ಅಧಿಕ ಮಂದಿ ನೋಂದಾವಣೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಪ್ರಮುಖ ಧಾರ್ಮಿಕ ಕ್ಷೇತ್ರಗಳಾದ ವಾರಣಾಸಿ, ಅಯೋಧ್ಯೆ, ಪ್ರಯಾಗ್ ರಾಜ್ ಸೇರಿದಂತೆ ಹಲವು ಸ್ಥಳಗಳಿಗೆ ಈ ರೈಲು ತೆರಳಲಿದ್ದು, ಕಾಶಿ ಯಾತ್ರೆ ತೆರಳಲು ಬಯಸುವವರು ಐಆರ್ಸಿಟಿಸಿ ವೆಬ್ ಸೈಟ್ ಗೆ ಭೇಟಿ ನೀಡಬಹುದಾಗಿದೆ.