ಕೊರೊನಾ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ಕಳೆಗುಂದಿದ್ದ ಎಲ್ಲ ಹಬ್ಬದಾಚರಣೆಗಳು ಈಗ ಮತ್ತೆ ತನ್ನ ಎಂದಿನ ವೈಭವವನ್ನು ಪಡೆದುಕೊಂಡಿವೆ. ನಾಡಹಬ್ಬ ದಸರಾ ಅದ್ದೂರಿಯಾಗಿ ನಡೆದಿದ್ದು, ಇದೀಗ ಕೊಡಗಿನ ಕುಲದೇವತೆ ಕಾವೇರಿ ಮಾತೆಯ ಪವಿತ್ರ ತೀರ್ಥೋದ್ಭವಕ್ಕೆ ದಿನಗಣನೆ ಆರಂಭವಾಗಿದೆ.
ಅಕ್ಟೋಬರ್ 17ರಂದು ಸಂಜೆ 7 ಗಂಟೆ 21 ನಿಮಿಷಕ್ಕೆ ತಲಕಾವೇರಿಯಲ್ಲಿ ತೀರ್ಥೋದ್ಭವವಾಗಲಿದ್ದು, ಇದನ್ನು ಕಣ್ತುಂಬಿಕೊಳ್ಳಲು ರಾಜ್ಯ ಮಾತ್ರವಲ್ಲದೆ ಹೊರರಾಜ್ಯದಿಂದಲೂ ಭಕ್ತ ಸಾಗರ ಹರಿದು ಬರುವ ನಿರೀಕ್ಷೆ ಇದೆ.
ತೀರ್ಥೋದ್ಭವ ಸಂದರ್ಭದಲ್ಲಿ ಪವಿತ್ರ ತೀರ್ಥ ಕುಂಡಿಕೆ ಆವರಣದಲ್ಲಿಯೇ ಸಾವಿರಾರು ಮಂದಿ ಸೇರುವ ನಿರೀಕ್ಷೆಯಿದ್ದು, ತೀರ್ಥ ವಿತರಣೆ ವೇಳೆ ನೂಕು ನುಗ್ಗಲು ಉಂಟಾಗದಂತೆ ನೋಡಿಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಕಾವೇರಿ ಜಾತ್ರೋತ್ಸವಕ್ಕೆ ಸಕಲ ಸಿದ್ಧತೆ ನಡೆಸಲಾಗಿದೆ.