alex Certify ಕಾವೇರಿ ನಿಸರ್ಗಧಾಮದ ʼಸೌಂದರ್ಯʼ ಸವಿಯಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾವೇರಿ ನಿಸರ್ಗಧಾಮದ ʼಸೌಂದರ್ಯʼ ಸವಿಯಿರಿ

ನೀವು ಪ್ರಕೃತಿ ಪ್ರಿಯರಾಗಿದ್ದಲ್ಲಿ, ಖಂಡಿತ ನಿಮಗೆ ಈ ನಿಸರ್ಗದತ್ತ ಪ್ರಕೃತಿಧಾಮವು ಸೂಕ್ತವಾದ ಸ್ಥಳವಾಗಿದೆ. ಕೊಡಗು ಜಲ್ಲೆಯ, ಕುಶಾಲನಗರದ ಸಮೀಪದಲ್ಲಿರುವುದೇ ‘ಕಾವೇರಿ ನಿಸರ್ಗಧಾಮ’. ನಿಮ್ಮ ಮನಸ್ಸು ಪ್ರಶಾಂತವಾಗಿ ಪ್ರಕೃತಿಯ ಸೌಂದರ್ಯವನ್ನು ಸವಿಯಲು ಬಯಸುತ್ತಿದ್ದರೆ ವಾರಾಂತ್ಯದಲ್ಲಿ ಒಮ್ಮೆ ಕುಟುಂಬ ಸಮೇತರಾಗಿ ಭೇಟಿ ನೀಡಬಹುದು.

ನಿಮ್ಮ ಕುಟುಂಬಕ್ಕೆ ಪರ್ಫೆಕ್ಟ್ ಪಿಕ್ನಿಕ್ ತಾಣವಾಗಿರೋ ಈ ಧಾಮದಲ್ಲಿ ದೊಡ್ಡವರಷ್ಟೇ ಅಲ್ಲಾ ಮಕ್ಕಳು ಸಹ ಎಂಜಾಯ್ ಮಾಡ್ತಾರೆ. ಏಕೆಂದರೆ, ಇಲ್ಲಿ ಬೋಟಿಂಗ್ ಮತ್ತು ಆನೆ ಸವಾರಿಯಿರುತ್ತದೆ. ಇಲ್ಲಿರುವ ಪ್ರಕೃತಿದತ್ತ ಸುಂದರ ಜಲಪಾತವು ಪ್ರವಾಸಿಗರಿಗೆ ಅತ್ಯಂತ ಶಾಂತ ಹಾಗೂ ವಿಶ್ರಾಂತ ಅನುಭವವನ್ನು ನೀಡುತ್ತದೆ. ಇಲ್ಲಿ ತಂಗಲು ಅರಣ್ಯ ಇಲಾಖೆಯಿಂದ ನಡೆಸಲ್ಪಡುವ ಅಥಿತಿ ಗೃಹಗಳಿವೆ. ಈ ನಿಸರ್ಗಧಾಮವು ಕರ್ನಾಟಕ ರಾಜ್ಯದ ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ಕಾವೇರಿ ನದಿಯಿಂದ ನಿರ್ಮಿಸಲ್ಪಟ್ಟ ಒಂದು ಪುಟ್ಟ ದ್ವೀಪವಾಗಿದೆ.

ನಮ್ಮ ರಾಜ್ಯವು ಪಶ್ಚಿಮ ಘಟ್ಟಗಳಿಂದ ಸುತ್ತುವರೆದಿರುವುದರಿಂದ, ಇಲ್ಲಿ  ಹರಿಯುವ ಅನೇಕ ನದಿಗಳಿಗೆ ಮೂಲವಾಗಿದೆ. ಈ ನಿಸರ್ಗಧಾಮವು ತನ್ನ ನೈಸರ್ಗಿಕವಾದ ಸೌಂದರ್ಯ ಹಾಗು ಶಾಂತಿಯುತ ಪರಿಸರಕ್ಕೆ ಹೆಸರುವಾಸಿಯಾಗಿದೆ. 64 ಎಕರೆ ವಿಸ್ತೀರ್ಣವುಳ್ಳ ಈ ದ್ವೀಪದಲ್ಲಿ ಸುತ್ತಲು ಎಲ್ಲಿ ನೋಡಿದರತ್ತ ಹಚ್ಚ ಹಸಿರನ್ನೇ ಒಳಗೊಂಡಿದೆ.

ಈ ದ್ವೀಪವನ್ನು ತಲುಪಲು ಒಂದು ತೂಗು ಸೇತುವೆಯನ್ನು ದಾಟಿ ಸಾಗಬೇಕಾಗುತ್ತದೆ. ಇಲ್ಲಿ ತೇಗದ ಮರಗಳು, ಶ್ರೀಗಂಧದ ಮರಗಳು ಮತ್ತು ಬಿದಿರಿನ ತೋಪುಗಳು ಸೇರಿದಂತೆ ಅನೇಕ ರೀತಿಯ ಮರಗಳ ಕಾನನವೇ ಇದೆ. ಇಲ್ಲಿ ಮಕ್ಕಳೊಂದಿಗೆ ಬಂದು ಕಾಲ ಕಳೆಯಲು ಸೂಕ್ತವಾದ ಪಿಕ್ನಿಕ್ ತಾಣವಾಗಿದೆ. ಮಕ್ಕಳಿಗೆ ಆಡಲು ಸಣ್ಣ ಪಾರ್ಕ್ ಇದ್ದು, ಇಲ್ಲಿರುವ ಮೊಲಗಳು, ಜಿಂಕೆಗಳು, ನವಿಲುಗಳು ಮಿನಿ ಮೃಗಾಲಯದಂತೆ ಮಕ್ಕಳ ಮನಸ್ಸಿಗೆ ಉಲ್ಲಾಸವನ್ನು ನೀಡುತ್ತವೆ.

ಇಲ್ಲಿ ಮರದ ಮೇಲೆ ಬಿದಿರಿನ ಕುಟೀರಗಳು ಮತ್ತು ವಸತಿ ಪ್ರದೇಶದಲ್ಲಿ ಇಲಾಖೆಯ ವತಿಯಿಂದ ಅತಿಥಿ ಗೃಹಗಳನ್ನು ನಿರ್ಮಿಸಲಾಗಿದೆ, ಇಲ್ಲಿರುವ ರೆಸ್ಟೋರಂಟ್ ನಲ್ಲಿ ಅಹಾರ ವನ್ನು ಸೇವಿಸಿ ರಾತ್ರಿ ವೇಳೆಗೆ  ಟ್ರೀ ಹೌಸ್ ನಲ್ಲಿ ವಿಶ್ರಾಂತಿ ಪಡೆದು ಅರಾಮವಾಗಿ ಪ್ರಕೃತಿಯ ಮಡಿಲಿನಲ್ಲಿ ನಿದ್ರಿಸಬಹುದು.

ಈ ಕಾವೇರಿ ನಿಸರ್ಗಧಾಮವು ಮಡಿಕೇರಿಯಿಂದ ಸುಮಾರು 25 ಕಿ.ಮೀ. ಮತ್ತು ಕುಶಾಲ ನಗರದಿಂದ 2 ಕಿ.ಮೀ. ದೂರದಲ್ಲಿದೆ. ಇಲ್ಲಿಗೆ ಬಂದು ತಲುಪಲು ಉತ್ತಮವಾದ ಸಾರಿಗೆ ವ್ಯವಸ್ಥೆಯಿದೆ ಹಾಗೇ ತಮ್ಮ ತಮ್ಮ  ಖಾಸಗಿ ವಾಹನಗಳಲ್ಲೂ ಸಹ ಬರಬಹುದು. ಇಲ್ಲಿರುವ ಹಲವಾರು ಆಕರ್ಷಣೆಗಳಿಂದ ಕಾವೇರಿ ನಿಸರ್ಗಧಾಮವು ಪ್ರವಾಸಿಗರನ್ನು ಸೆಳೆಯುವ ಜನಪ್ರಿಯ ತಾಣವಾಗಿದೆ. ಮತ್ತಿನ್ನೇಕೆ ತಡ ವೀಕೆಂಡ್ ಗೆ ಪ್ಲಾನ್ ಮಾಡಿ ಹೋಗಿ ಬನ್ನಿ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...