ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಸಿದ್ದರಾಮಯ್ಯನವರು ಹಾಲಿ ತಾವು ವಾಸವಿರುವ ಕುಮಾರ ಪಾರ್ಕ್ ಬಳಿಯಿರುವ ಬಂಗಲೆಯನ್ನು ತೆರವುಗೊಳಿಸಿ ಸಿಎಂ ಗೃಹ ಕಚೇರಿ ಕೃಷ್ಣಾಗೆ ಹೊಂದಿಕೊಂಡಿರುವ ‘ಕಾವೇರಿ’ಯನ್ನು ಆಯ್ಕೆ ಮಾಡಿಕೊಂಡಿದ್ದು, ಅಲ್ಲಿಗೆ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ.
ಕಾವೇರಿಯಲ್ಲಿ ಈಗ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ವಾಸ್ತವ್ಯ ಹೂಡಿದ್ದು, ಮೂರ್ನಾಲ್ಕು ದಿನಗಳಲ್ಲಿ ಅವರು ಅದನ್ನು ತೆರವುಗೊಳಿಸಿ ಡಾಲರ್ಸ್ ಕಾಲೋನಿಯ ಸ್ವಂತ ಮನೆಗೆ ತೆರಳಲಿದ್ದಾರೆ ಎನ್ನಲಾಗಿದ್ದು, ಇದಾದ ಬಳಿಕ ಸಣ್ಣಪುಟ್ಟ ರಿಪೇರಿ ಹಾಗೂ ಪೇಂಟಿಂಗ್ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಲ್ಲಿಗೆ ಬರಲಿದ್ದಾರೆ ಎಂದು ಹೇಳಲಾಗಿದೆ.
ಇನ್ನು ಸಿದ್ದರಾಮಯ್ಯನವರು ಹಾಲಿ ವಾಸವಾಗಿರುವ ಕುಮಾರ ಪಾರ್ಕ್ ಬಳಿಯ ಬಂಗಲೆಯನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಯ್ಕೆ ಮಾಡಿಕೊಂಡಿದ್ದು, ಸಿದ್ದರಾಮಯ್ಯ ‘ಕಾವೇರಿ’ಗೆ ತೆರಳಿದ ಬಳಿಕ ಡಿಕೆಶಿ ಇಲ್ಲಿಗೆ ಬರಲಿದ್ದಾರೆ. 2013ರಲ್ಲಿ ಮೊದಲ ಬಾರಿಗೆ ಸಿಎಂ ಆಗಿ ಆಯ್ಕೆಯಾದ ಸಿದ್ದರಾಮಯ್ಯ ಇದೆ ಬಂಗಲೆಯಿಂದ ‘ಕಾವೇರಿ’ ಗೆ ಶಿಫ್ಟ್ ಆಗಿದ್ದು, ಈಗಲೂ ಕೂಡ ಇಲ್ಲಿಂದಲೇ ಮತ್ತೆ ಮುಖ್ಯಮಂತ್ರಿ ಆಗಿದ್ದಾರೆ. ಹೀಗಾಗಿ ಡಿ.ಕೆ. ಶಿವಕುಮಾರ್ ಈ ಬಂಗಲೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.