ಮೊಳಕೆ ಕಾಳುಗಳ ಪ್ರಯೋಜನಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಆದರೆ ಬಹುತೇಕರಿಗೆ ಅದನ್ನು ಮೊಳಕೆ ಬರಿಸುವುದು ಹೇಗೆ ಎಂಬುದು ಸರಿಯಾಗಿ ತಿಳಿದಿರುವುದಿಲ್ಲ. ಅದು ಹೇಗೆಂದು ತಿಳಿಯೋಣ ಬನ್ನಿ..…
ಮೊಳಕೆ ಕಾಳು ಪ್ರೊಟೀನ್ ಭರಿತ ಮಾತ್ರವಲ್ಲ ಇದರಲ್ಲಿ ಕ್ಯಾಲ್ಸಿಯಂ, ವಿಟಮಿನ್, ಮಿನರಲ್ಸ್ ಗಳು ಹೇರಳವಾಗಿವೆ. ಇವುಗಳ ಸೇವನೆಯಿಂದ ಕೂದಲು ಉದುರುವುದು ನಿಂತು ಹೇರಳವಾಗಿ ಬೆಳೆಯುತ್ತದೆ. ತ್ವಚೆ ಹೊಳೆಯುತ್ತದೆ.
ಇದರಲ್ಲಿರುವ ಕ್ಯಾಲೊರಿ ಪ್ರಮಾಣ ಬಲು ಕಡಿಮೆಯಾದ್ದರಿಂದ ನಿಮ್ಮ ದೇಹ ತೂಕ ಇಳಿಸಲೂ ಇದು ನೆರವಾಗುತ್ತದೆ. ಕಾಳುಗಳನ್ನು ಮೊಳಕೆ ಬರಿಸಲು ಚೆನ್ನಾಗಿ ತೊಳೆದು ಕನಿಷ್ಠ 12 ಗಂಟೆ ಅಂದರೆ ರಾತ್ರಿ ಬೆಳಗ್ಗಿನ ತನಕ ನೆನೆಸಿಡಿ.
ಬಳಿಕ ಮತ್ತೆ ತೊಳೆದು ನೀರನ್ನು ಸಂಪೂರ್ಣ ಸೋಸಿ. ಸ್ವಚ್ಛವಾದ ಬಟ್ಟೆಯಲ್ಲಿ ಇದನ್ನು ಕಟ್ಟಿಡಿ. ಒಂದು ದಿನದ ಬಳಿಕ ಕಟ್ಟಿದ ಬಟ್ಟೆ ಬಿಚ್ಚಿದರೆ ನಿಮ್ಮ ಕಾಳುಗಳು ಮೊಳಕೆ ಬಿಟ್ಟಿರುತ್ತವೆ. ಉದ್ದದ ಮೊಳಕೆ ಬೇಕಿದ್ದರೆ ಮತ್ತೊಂದು ದಿನ ಅದೇ ವಿಧಾನದಲ್ಲಿ ಕಟ್ಟಿಡಬಹುದು.
ಈ ಕಾಳುಗಳನ್ನು ಹಸಿಯಾಗಿಯೇ ಸೇವಿಸಬೇಕು. ಇದು ದೀರ್ಘಕಾಲ ನಿಮಗೆ ಹೊಟ್ಟೆ ಹಸಿವಿನ ಅನುಭವ ನೀಡುವುದಿಲ್ಲ. ದಿನಕ್ಕೆ ಒಂದರಿಂದ ಎರಡು ಹಿಡಿಯಷ್ಟು ಸೇವನೆ ಸಾಕು. ಇದನ್ನು ಸಲಾಡ್ ರೂಪದಲ್ಲಿ ಅಂದರೆ ನಿಂಬೆರಸ ಹಾಗೂ ಈರುಳ್ಳಿ ಹಾಕಿ ತಿನ್ನುವುದರಿಂದ ಬಾಯಿಗೂ ರುಚಿ. ಆರೋಗ್ಯಕ್ಕೂ ಒಳ್ಳೆಯದು.