ಕೇರಳದ ಜಿಲ್ಲಾಧಿಕಾರಿಯೊಬ್ಬರು ಕಾಲೇಜು ವಿದ್ಯಾರ್ಥಿಗಳೊಂದಿಗೆ ಬೊಂಬಾಟ್ ಆಗಿ ಕುಣಿದಿರುವ ದೃಶ್ಯ ನೆಟ್ಟಿಗರ ಹೃದಯಗೆದ್ದಿದೆ.
ಪತ್ತನಂತಿಟ್ಟ ಜಿಲ್ಲಾಧಿಕಾರಿ ದಿವ್ಯಾ ಎಸ್.ಅಯ್ಯರ್ ಅವರು ಕಲಾ ಉತ್ಸವದ ತಯಾರಿಯಲ್ಲಿ ನಿರತರಾಗಿದ್ದ ಕ್ಯಾಥೋಲಿಕೇಟ್ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ನೃತ್ಯ ಮಾಡುವ ಮೂಲಕ ಎಲ್ಲರನ್ನೂ ಆಕರ್ಷಿಸಿದ್ದಾರೆ.
ಸಂಜಯ್ ಲೀಲಾ ಬನ್ಸಾಲಿಯವರ ಮಹಾನ್ ಕೃತಿಯಾದ ಗೋಲಿಯೋನ್ ಕಿ ರಾಸ್ಲೀಲಾ ರಾಮ್-ಲೀಲಾದ, ನಾಗದಾ ಸಂಗ್ ಧೋಲ್ ಹಾಡಿಗೆ ಸಖತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ. ಈ ವೇಳೆ ಅಲ್ಲಿ ಸೇರಿದ್ದವರು ಮಾತ್ರವಲ್ಲದೆ, ಆನ್‌ಲೈನ್‌ನಲ್ಲಿ ಅವರ ಪ್ರದರ್ಶನವನ್ನು ವೀಕ್ಷಿಸಿದವರೆಲ್ಲರೂ ಸಂತೋಷಪಪಟ್ಟಿದ್ದಾರೆ.
ಐಎಎಸ್ ಅಧಿಕಾರಿ ವಿದ್ಯಾರ್ಥಿಗಳೊಂದಿಗೆ ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ತ್ವರಿತವಾಗಿ ವೈರಲ್ ಆಗಿದ್ದು, ಫೇಸ್‌ಬುಕ್‌ನಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ.
ವರದಿ ಪ್ರಕಾರ, ಕೊಟ್ಟಾಯಂನ ಮಹಾತ್ಮಾ ಗಾಂಧಿ ವಿಶ್ವವಿದ್ಯಾನಿಲಯದ ಕಲಾ ಉತ್ಸವದ ಸಿದ್ಧತೆಗಳ ಮೇಲ್ವಿಚಾರಣೆಗಾಗಿ ಡಿಸಿ ಜಿಲ್ಲಾ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಈ ವೇಳೆ ಯಾವುದೇ ಪೂರ್ವಸಿದ್ಧತೆಯಿಲ್ಲದ ಅವರು ನೃತ್ಯ ಮಾಡಿದ್ದಾರೆ.
ತನ್ನ ಕುಟುಂಬ ಸದಸ್ಯರೊಂದಿಗೆ ಹಾಜರಿದ್ದ ಅಯ್ಯರ್ ವಿದ್ಯಾರ್ಥಿಗಳ ಪ್ರದರ್ಶನವನ್ನು ಆನಂದಿಸುತ್ತಿದ್ದರು. ಈ ವೇಳೆ ಕೆಲವು ವಿದ್ಯಾರ್ಥಿಗಳು ನೃತ್ಯಕ್ಕೆ ಸೇರಲು ಸಿದ್ಧರಿದ್ದೀರಾ ಎಂದು ಕೇಳಿದ್ದಾರೆ. ಮೊದಲೇ ಹಾಡು ಹಾಗೂ ನೃತ್ಯ ಅಂದ್ರೆ ಇಷ್ಟಪಡುವ ಜಿಲ್ಲಾಧಿಕಾರಿ, ತಾವೊಬ್ಬ ಅಧಿಕಾರಿ ಎಂಬುದನ್ನೂ ಮರೆತು ಬಹಳ ಸಂತೋಷದಿಂದ ವಿದ್ಯಾರ್ಥಿಗಳೊಂದಿಗೆ ನೃತ್ಯ ಮಾಡಿದ್ದಾರೆ.
ನೆಟ್ಟಿಗರು ಡಿಸಿಯ ಹಾವಭಾವದಿಂದ ಮಾತ್ರವಲ್ಲದೆ, ಅವರ ಪ್ರತಿಭೆಯಿಂದಲೂ ಸಾಕಷ್ಟು ಪ್ರಭಾವಿತರಾಗಿದ್ದಾರೆ. ಅವರ ಆಕರ್ಷಕವಾದ ನೃತ್ಯವನ್ನು ಕಂಡ ನೆಟ್ಟಿಗರು, ಇಂತಹ ಸ್ಟೆಪ್ಸ್ ನೆನ್ನೆ, ಮೊನ್ನೆಯಿಂದ ಕಲಿತದ್ದಲ್ಲ ಎಂಬುದು ಸ್ಪಷ್ಟವಾಗಿ ತಿಳಿದುಬರುತ್ತದೆ ಎಂದು ಹಾಡಿ ಹೊಗಳಿದ್ದಾರೆ. ಅಯ್ಯರ್ ಅವರು ತಮ್ಮ ಶಾಲೆ ಮತ್ತು ಕಾಲೇಜು ದಿನಗಳಲ್ಲಿ ಕೂಚಿಪುಡಿ, ಒಡಿಸ್ಸಿ ಮತ್ತು ಕಥಕ್ಕಳಿಯಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.