ಕಳೆದ ವರ್ಷದ ಆರಂಭದಲ್ಲಿ ಕಾಣಿಸಿಕೊಂಡ ಕೊರೊನಾ ಸಾರ್ವಜನಿಕರನ್ನು ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಇನ್ನಿಲ್ಲದಂತೆ ಬಾಧಿಸಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಮೇಲೂ ಕೊರೊನಾ ಪರಿಣಾಮ ಬೀರಿದ್ದು, ಪಠ್ಯ ಪ್ರವಚನಗಳನ್ನು ಆನ್ಲೈನ್ ಮೂಲಕ ಕೇಳುವಂತಾಗಿದೆ. ಇದು ಅವರುಗಳ ಪ್ರಗತಿಯ ಮೇಲೆ ಪರಿಣಾಮ ಬೀರಿದೆ.
ಕೊರೊನಾ ಮೊದಲನೇ ಅಲೆ ಕಡಿಮೆಯಾಗಿ ಇನ್ನೇನು ಎಲ್ಲವೂ ಸಹಜ ಸ್ಥಿತಿಗೆ ಬರಲಿದೆ ಎಂಬ ಸಂತಸದಲ್ಲಿರುವಾಗಲೇ ಬರಸಿಡಿಲಿನಂತೆ ಬಂದಪ್ಪಳಿಸಿದ ಕೊರೊನಾ ಎರಡನೇ ಅಲೆ ಜನಜೀವನವನ್ನು ಹಿಂಡಿ ಹಿಪ್ಪೆ ಮಾಡಿ ಹಾಕಿದೆ. ಹೀಗಾಗಿ ಆರಂಭವಾಗಿದ್ದ ಶಾಲಾ -ಕಾಲೇಜುಗಳು ಸಹ ಮತ್ತೆ ಮುಚ್ಚಿವೆ. ಈ ಕಾರಣಕ್ಕೆ ವಿದ್ಯಾರ್ಥಿಗಳು ಅನಿವಾರ್ಯವಾಗಿ ಮತ್ತೆ ಆನ್ಲೈನ್ ಪಾಠ ಪ್ರವಚನಗಳಿಗೆ ಮೊರೆ ಹೋಗುವಂತಾಗಿದೆ.
ಇದೀಗ ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಕಾಲೇಜು ಆರಂಭದ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳಿಗೆ ಖುಷಿ ಸುದ್ದಿ ನೀಡಿದ್ದಾರೆ. ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ಹಾಕಿಸಲು ಆದ್ಯತೆ ನೀಡಲಾಗುತ್ತಿದ್ದು, ಬೋಧಕ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಲಸಿಕೆ ಪಡೆದ ಬಳಿಕ ಭೌತಿಕವಾಗಿ ತರಗತಿಗಳನ್ನು ಆರಂಭಿಸುವ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.