ಭಾರತದಲ್ಲಿ ಹಳದಿ ಲೋಹ ಚಿನ್ನಕ್ಕೆ ಅಪಾರ ಬೇಡಿಕೆ ಇದೆ. ಹೀಗಾಗಿಯೇ ಇದನ್ನು ವಾಮಮಾರ್ಗದಲ್ಲಿ ಸಾಗಿಸಲು ನಿರಂತರ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಇದಕ್ಕಾಗಿ ತರಹೇವಾರಿ ವಿಧಾನಗಳನ್ನು ಅಪರಾಧಿಗಳು ಅನುಸರಿಸುತ್ತಾರಾದರೂ ಅಧಿಕಾರಿಗಳ ಪ್ರಯತ್ನದಿಂದ ಇವು ವಿಫಲವಾಗುತ್ತವೆ.
ಇದೀಗ ಇಂಥವುದೇ ಒಂದು ಪ್ರಕರಣ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದ್ದು, ಬ್ಯಾಂಕಾಕ್ ನಿಂದ ಬಂದಿಳಿದಿದ್ದ ಪ್ರಯಾಣಿಕನನ್ನು ಅನುಮಾನದ ಮೇರೆಗೆ ವಶಕ್ಕೆ ಪಡೆದು ಪರಿಶೀಲಿಸಿದ ಕಸ್ಟಮ್ಸ್ ಅಧಿಕಾರಿಗಳು ಆತ ಚಿನ್ನ ತಂದ ಪರಿ ಕಂಡು ದಂಗಾಗಿದ್ದಾರೆ.
ಹೌದು, ಈ ಪ್ರಯಾಣಿಕ ತನ್ನ ಕಾಲಿಗೆ ಸುತ್ತಿಕೊಂಡಿದ್ದ ಬ್ಯಾಂಡೇಜ್ ನಲ್ಲಿ ಬರೋಬ್ಬರಿ 43 ಲಕ್ಷ ರೂಪಾಯಿ ಮೌಲ್ಯದ 700 ಗ್ರಾಂ ಚಿನ್ನವನ್ನು ಆಡಗಿಸಿಟ್ಟುಕೊಂಡಿದ್ದು, ಇದೀಗ ಇದನ್ನು ವಶಪಡಿಸಿಕೊಂಡಿರುವ ಕಸ್ಟಮ್ಸ್ ಅಧಿಕಾರಿಗಳು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.