ಶಾರ್ಕ್ ಮೀನುಗಳ ಬಗ್ಗೆ ಬಹುಶಃ ನೀವು ಕೇಳಿರಬಹುದು. ಇವು ಪರಭಕ್ಷಕ ಜೀವಿಯಾಗಿದ್ದು, ಮಾನವರನ್ನೂ ಕೊಲ್ಲುವ ಸಾಮರ್ಥ್ಯ ಇದಕ್ಕಿದೆ. ಇದೀಗ ಥೈಲ್ಯಾಂಡ್‌ನಲ್ಲಿ 8 ವರ್ಷ ವಯಸ್ಸಿನ ಅಬಾಯ್, ಶಾರ್ಕ್ ದಾಳಿಯಿಂದ ಬದುಕುಳಿದಿದ್ದಾನೆ.
ಫುಕೆಟ್ ದ್ವೀಪದಲ್ಲಿ ನಪತ್ ಚೈಯಾರಕ್ ಕ್ರಿಸ್ಟೆಂಕೊ ಎಂಬ ಬಾಲಕ ತನ್ನ ಉಕ್ರೇನಿಯನ್ ತಂದೆಯೊಂದಿಗೆ ಸಮುದ್ರದಲ್ಲಿ ಈಜುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಶಾರ್ಕ್ ಬಾಲಕನ ಮೇಲೆ ಎರಗಿದ್ದು, ಆತನ ಕಾಲನ್ನು ಕಚ್ಚಿ ಹಿಡಿದಿತ್ತು. ಬಾಲಕ ನೋವಿನಿಂದ ಕಿರುಚುತ್ತಾ ಶಾರ್ಕ್ ಅನ್ನು ಓಡಿಸಲು ಪ್ರಯತ್ನಿಸಿದ್ದಾನೆ.
ಆದರೆ, ಇದು ಸಾಧ್ಯವಾಗದಿದ್ದಾಗ ಬಾಲಕ ಶಾರ್ಕ್ ಮೀನಿನ ಮುಖಕ್ಕೆ ಗುದ್ದಿದ್ದಾನೆ. ಇದರಿಂದ ಬೆದರಿದ ಶಾರ್ಕ್ ಆಳವಾದ ನೀರಿನಲ್ಲಿ ಓಡಿಹೋಗಿದೆ. ಈ ಘಟನೆಯಿಂದ ಗಾಬರಿಗೊಂಡ ಪೋಷಕರು ಬಾಲಕನನ್ನು ನೀರಿನಿಂದ ಮೇಲಕ್ಕೆ ಎಳೆದಿದ್ದಾರೆ.
ವೈದ್ಯಕೀಯ ಸಿಬ್ಬಂದಿ ಬಾಲಕನಿಗೆ ಪ್ರಥಮ ಚಿಕಿತ್ಸೆ ನೀಡಿದ್ದು, ನಂತರ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾನು ಈಜುತ್ತಿದ್ದಾಗ ಇದ್ದಕ್ಕಿದ್ದಂತೆ ತನ್ನ ಕಾಲಿನಲ್ಲಿ ನೋವು ಕಾಣಿಸಿಕೊಂಡಿತು. ಕೆಳಗೆ ನೋಡಿದಾಗ ಶಾರ್ಕ್ ತನ್ನನ್ನು ಕಚ್ಚಿ ಹಿಡಿದಿದೆ. ಏನು ಮಾಡಬೇಕೆಂದು ತಿಳಿಯದೆ ಅದರ ಮುಖಕ್ಕೆ ಬಲವಾಗಿ ಬಾರಿಸಬೇಕಾಯಿತು. ಹೀಗಾಗಿ ಅದು ತನ್ನನ್ನು ಬಿಟ್ಟು ಓಡಿ ಹೋಯಿತು ಅಂತಾ ಬಾಲಕ ಹೇಳಿದ್ದಾನೆ.
ಗಾಯದ ಗುರುತುಗಳ ಆಧಾರದ ಮೇಲೆ ಸುಮಾರು 80 ರಿಂದ 120 ಸೆಂ.ಮೀ ಉದ್ದದ ಬರ್ರಾಕುಡಾದಿಂದ ಕಡಿತ ಉಂಟಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಸಮುದ್ರ ಮತ್ತು ಶಾರ್ಕ್ ತಜ್ಞರು ಈ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಬ್ಲ್ಯಾಕ್‌ಟಿಪ್ ರೀಫ್ ಶಾರ್ಕ್ ಅಥವಾ ಬುಲ್ ಶಾರ್ಕ್ ದಾಳಿ ಮಾಡಿರಬಹುದು ಎಂದು ಅಂದಾಜಿಸಿದ್ದಾರೆ. ಇನ್ನು, ಬಾಲಕನ ಗಾಯಕ್ಕೆ 33 ಹೊಲಿಗೆಗಳನ್ನು ಹಾಕಲಾಗಿದೆ.