ನವದೆಹಲಿ: ಬಿಜೆಪಿ ಪಕ್ಷಕ್ಕೆ 1 ಸಾವಿರ ರೂಪಾಯಿ ದೇಣಿಗೆ ನೀಡುವದರ ಮೂಲಕ ಪ್ರಧಾನಿ ನರೇಂದ್ರ ಮೋದಿ ಪಕ್ಷದ ಬೆಂಬಲಿಗರಿಗೆ ದೇಣಿಗೆ ನೀಡುವಂತೆ ಕರೆ ಕೊಟ್ಟಿದ್ದಾರೆ.
ಈ ಕುರಿತು ಟ್ವಿಟ್ ಮಾಡಿ ತಿಳಿಸಿರುವ ಅವರು, ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ಹಲವರು ತಮ್ಮ ಜೀವನ ಪೂರ್ತಿ ಜನರ ಸೇವೆ ಬಯಸಿದ್ದಾರೆ. ಅವರೆಲ್ಲ ಹಗಲಿರುಳು ದೇಶ ಹಾಗೂ ಜನರ ಸೇವೆಗಾಗಿ ಶ್ರಮಿಸುತ್ತಿದ್ದಾರೆ. ಹೀಗಾಗಿ ಪಕ್ಷದ ಬೆಂಬಲಿಗರು ದೇಣಿಗೆ ನೀಡುವುದರ ಮೂಲಕ ಅಂತಹ ಜನರ ಸೇವೆಗೆ ಅವಕಾಶ ನೀಡಿ, ಬೆನ್ನು ತಟ್ಟಬೇಕು ಎಂದು ಮನವಿ ಮಾಡಿದ್ದಾರೆ.
ಅಲ್ಲದೇ, ತಾವು ಪಕ್ಷಕ್ಕೆ ದೇಣಿಗೆ ನೀಡಿರುವ ರಶೀದಿಯನ್ನು ಕೂಡ ಟ್ವಿಟ್ ನಲ್ಲಿ ಮೋದಿ ಅಪ್ಲೋಡ್ ಮಾಡಿದ್ದಾರೆ. ಬಿಜೆಪಿ ಯಾವಾಗಲೂ ದೇಶ ಸೇವೆಯನ್ನೇ ಮೊದಲ ಆದ್ಯತೆಯಾಗಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿರುವ ಪಕ್ಷ. ಹೀಗಾಗಿ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸುವ ಅವಶ್ಯಕತೆ ಇದ್ದು, ಬೆಂಬಲಿಗರು ತಮ್ಮ ಕೈಲಾದಷ್ಟು ಸಹಾಯವನ್ನು ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನವಾದ ಇಂದು ಆರಂಭವಾಗಿರುವ ಈ ದೇಣಿಗೆ ಸಂಗ್ರಹ ಅಭಿಯಾನ ಫೆ.11ರಂದು ದೀನ ದಯಾಳ್ ಉಪಾಧ್ಯಾಯ ಅವರ ಪುಣ್ಯತಿಥಿಯಂದು ಅಂತ್ಯವಾಗಲಿದೆ.
ಬಿಜೆಪಿ ಪಕ್ಷ ಬೆಂಬಲಿಸುವವರು 5 ರೂಪಾಯಿಂದ 1 ಸಾವಿರದವರೆಗೆ ದೇಣಿಗೆ ನೀಡಬಹುದು ಎನ್ನಲಾಗಿದ್ದು, ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಹಲವು ನಾಯಕರು ಈಗಾಗಲೇ ಪಕ್ಷಕ್ಕೆ 1 ಸಾವಿರ ರೂಪಾಯಿ ದೇಣಿಗೆ ನೀಡಿದ್ದಾರೆ.