ಸ್ಥಳೀಯ ಬಿಜೆಪಿ ಮುಖಂಡ ಬುಡಕಟ್ಟು ಜನಾಂಗದ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಅಮಾನವೀಯ ಘಟನೆಯೊಂದು ಎಲ್ಲೆಡೆ ಸದ್ದು ಮಾಡಿತ್ತು. ಇದೀಗ ಅದೇ ಬುಡಕಟ್ಟು ಜನಾಂಗದ ವ್ಯಕ್ತಿಯ ಪಾದವನ್ನು ಸ್ವತಃ ಮಧ್ಯ ಪ್ರದೇಶ ಸಿಎಂ ಶಿವರಾಜ್ ಚೌಹಾಣ್ ತೊಳೆದಿದ್ದು ಮಾತ್ರವಲ್ಲದೇ ನೀನು ನನ್ನ ಪಾಲಿಗೆ ಸುಧಾಮನಿದ್ದಂತೆ ಎಂದು ಬಣ್ಣಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸಿಎಂ ಶಿವರಾಜ್ ಚೌಹಾಣ್ ಸಂತ್ರಸ್ತ ವ್ಯಕ್ತಿ ದಶ್ಮತ್ ರಾವತ್ ಪಕ್ಕದಲ್ಲಿ ಕುಳಿತು ಮಾತನಾಡಿದ್ದು, ಈ ಘಟನೆಯಿಂದ ನನಗೆ ತುಂಬಾನೇ ನೋವಾಗಿದೆ. ನೀನು ನನ್ನ ಪಾಲಿಗೆ ಸುಧಾಮನಂತೆ ಎಂದು ಹೇಳಿದ್ದಾರೆ.
ಹಿಂದೂ ಪುರಾಣಗಳಲ್ಲಿ ಬರುವ ಕತೆಯ ಪ್ರಕಾರ, ಸುಧಾಮನು ತನ್ನ ಬಾಲ್ಯದ ಒಡನಾಡಿ ಶ್ರೀಕೃಷ್ಣನ ಆಪ್ತ ಸ್ನೇಹಿತನಾಗಿದ್ದನು. ಇಬ್ಬರ ನಡುವೆ ಸ್ಥಾನಮಾನದಲ್ಲಿ ಅಜಗಜಾಂತರದ ವ್ಯತ್ಯಾಸವಿದ್ದರೂ ಸಹ ಇವರ ನಡುವೆ ಸ್ನೇಹಕ್ಕೆ ಅಂತಸ್ತು ಎಂದಿಗೂ ಅಡ್ಡಿಯಾಗಿರಲಿಲ್ಲ. ಕೃಷ್ಣ ರಾಜನಾಗಿದ್ದಾಗ ಸುಧಾಮ ಬಡತನದ ಜೀವನ ಸಾಗಿಸುತ್ತಿದ್ದನು.
ಸಿಧಿ ಜಿಲ್ಲೆಯಲ್ಲಿ ಕಾರ್ಮಿಕನ ಮೇಲೆ ಸ್ಥಳೀಯ ಬಿಜೆಪಿ ಮುಖಂಡ ಪ್ರವೇಶ್ ಶುಕ್ಲಾ ಎಂಬಾತ ಮೂತ್ರ ವಿಸರ್ಜನೆ ಮಾಡಿದ್ದನು . ಈ ವಿಡಿಯೋ ವೈರಲ್ ಆಗಿರುವ ಬೆನ್ನಲ್ಲೇ ಪ್ರವೇಶ್ ಶುಕ್ಲಾನನ್ನು ಬಂಧಿಸಲಾಗಿದೆ. ಈ ಘಟನೆ ಸಂಬಂಧ ಸಂತ್ರಸ್ತ ರಾವತ್ ಬಳಿಯಲ್ಲಿ ಸಿಎಂ ಚೌಹಾಣ್ ಕ್ಷಮೆಯಾಚಿಸಿದ್ದಾರೆ. ಕಾರ್ಮಿಕನ ಪಾದವನ್ನು ತೊಳೆಯುವ ಮೂಲಕ ಕ್ಷಮೆಯಾಚಿಸಿದ್ದಾರೆ.