ವಿಜಯನಗರ ಜಿಲ್ಲೆ ಹೂವಿನಹಡಗಲಿಯ ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕೋತ್ಸವ ರಾಜ್ಯ ಮಾತ್ರವಲ್ಲದೆ ಇಡೀ ದೇಶದಲ್ಲಿ ಪ್ರಸಿದ್ಧ. ಕಾರ್ಣಿಕ ಸಂದರ್ಭದಲ್ಲಿ ಇಲ್ಲಿ ಹೇಳುವ ಭವಿಷ್ಯ ಅತ್ಯಂತ ನಿಖರ ಎಂಬ ಪ್ರತೀತಿಯಿದೆ. ಆದರೆ ಇದೀಗ ಭವಿಷ್ಯವೊಂದು ಧರ್ಮಕರ್ತರ ಸಂಕಷ್ಟಕ್ಕೆ ಕಾರಣವಾಗಿದೆ.
ಕಳೆದ ಫೆಬ್ರವರಿ 18 ರಂದು ನಡೆದಿದ್ದ ಕಾರ್ಣಿಕೋತ್ಸವ ಸಂದರ್ಭದಲ್ಲಿ ದೇಗುಲದ ವಂಶಪಾರಂಪರ್ಯ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್, ಇನ್ನು ಆರು ತಿಂಗಳೊಳಗಾಗಿ ರಾಜ್ಯದ ಮುಖ್ಯಮಂತ್ರಿ ಬದಲಾಗುತ್ತಾರೆ. ಗಡ್ಡಧಾರಿ ಒಬ್ಬರು ಹೊಸ ಮುಖ್ಯಮಂತ್ರಿಯಾಗುತ್ತಾರೆ ಎಂದು ಜ್ಯೋತಿಷ್ಯ ಹೇಳಿದ್ದರು.
ಆದರೆ ಆರು ತಿಂಗಳು ಕಳೆದರೂ ಸಹ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಭಕ್ತರು ಸ್ವಾಮಿಯ ದೈವವಾಣಿ ದುರುಪಯೋಗಪಡಿಸಿಕೊಂಡು ಗೊಂದಲ ಮೂಡಿಸುವ ಜ್ಯೋತಿಷ್ಯದ ಹೇಳಿಕೆ ನೀಡಿರುವ ವೆಂಕಪ್ಪಯ್ಯರನ್ನು ದೇಗುಲದಿಂದ ಉಚ್ಚಾಟಿಸಬೇಕೆಂದು ತಹಶೀಲ್ದಾರ್ ಅವರಿಗೆ ಮನವಿ ಮಾಡಿದ್ದಾರೆ.