ಉಡುಪಿ ಜಿಲ್ಲೆಯಲ್ಲಿ ಕಾರ್ಕಳ ತಾಲೂಕಿನಲ್ಲಿರುವ ಗೊಮ್ಮಟನನ್ನು ವೀಕ್ಷಿಸಲು ನೀವು ಮಂಗಳೂರಿನಿಂದ 32 ಮೈಲು, ಮೂಡುಬಿದ್ರೆಯಿಂದ 10 ಮೈಲು, ವೇಣೂರಿನಿಂದ 22 ಮೈಲು ದೂರ ಕ್ರಮಿಸಬೇಕು. ಇದು ಕರಿಕಲ್ಲಿನ ನೆಲವಾದ್ದರಿಂದ ಕಾರ್ಕಳ ಎಂಬ ಹೆಸರು ಬಂದಿದೆ.
ಜಗತ್ತಿನಲ್ಲೇ ಎರಡನೇ ಅತೀ ಎತ್ತರದ ಬಾಹುಬಲಿಯ ಏಕ ಶಿಲಾ ಮೂರ್ತಿಯ ವಿಗ್ರಹ ಇದಾಗಿದೆ. ಈ ವಿಗ್ರಹದ ಎತ್ತರ 42 ಅಡಿ. ಕಾರ್ಕಳವನ್ನಾಳುತ್ತಿದ್ದ ವೀರಪಾಂಡ್ಯ ಭೈರರಸನು 1432 ರಲ್ಲಿ ಗೊಮ್ಮಟೇಶ್ವರ ಮೂರ್ತಿಯನ್ನು ಸ್ಥಾಪಿಸಿದ ಎಂಬ ಐತಿಹಾಸಿಕ ಉಲ್ಲೇಖವಿದೆ. ಈ ಮೂರ್ತಿ ನಿರ್ಮಾಣಗೊಂಡು ಇಂದಿಗೆ 590 ವರ್ಷಗಳಾಗಿವೆ.
ಇಲ್ಲಿನ ಗೊಮ್ಮಟ ತಪಸ್ಸಿಗೆ ನಿಂತಂತೆ ಭಾವಪೂರ್ಣವಾಗಿದೆ. ಸತ್ಯ, ಸಂಯಮ, ಅಹಿಂಸೆ, ವೈರಾಗ್ಯ, ತ್ಯಾಗದ ಆದರ್ಶವಾಗಿ ಗೋಮಟೇಶ್ವರ ಮೂರ್ತಿ ಸರ್ವಕಾಲಿಕ ಸಂದೇಶವನ್ನು ಜಗತ್ತಿಗೆ ಸಾರುತ್ತಿದೆ. ಜೈನ ಸಂಪ್ರದಾಯದಂತೆ ಪ್ರತೀ 12 ವರ್ಷಕ್ಕೊಮ್ಮೆ ವಿಗ್ರಹಕ್ಕೆ ಮಹಾಮಸ್ತಕಾಭಿಷೇಕ ನೆರವೇರಿಸುವ ಸಂಪ್ರದಾಯವೂ ನಡೆದು ಬಂದಿದೆ.