ವರ್ಷದಲ್ಲಿ ಎರಡು ಬಾರಿಯಾದ್ರೂ ವಾಹನಗಳ ಬೆಲೆ ಏರಿಕೆ ಮಾಡೋದು ಕಂಪನಿಗಳ ಟ್ರೆಂಡ್ ಆಗ್ಬಿಟ್ಟಿದೆ. ಇದೀಗ ಟೊಯೊಟಾ ಕಿರ್ಲೋಸ್ಕರ್ ಕಂಪನಿ ಗ್ರಾಹಕರಿಗೆ ಶಾಕ್ ಕೊಟ್ಟಿದೆ. ಟೊಯೊಟಾ ತನ್ನ ಎಲ್ಲಾ ಕಾರುಗಳ ಬೆಲೆಯನ್ನು ಏಪ್ರಿಲ್ 1ರಿಂದ ಶೇ.4 ರಷ್ಟು ಹೆಚ್ಚಿಸುವುದಾಗಿ ಘೋಷಿಸಿದೆ. ಕಚ್ಚಾ ವಸ್ತುಗಳ ಬೆಲೆಯಲ್ಲಿನ ಏರಿಕೆಯಿಂದ ಈ ಕ್ರಮ ಅನಿವಾರ್ಯ ಅಂತಾ ಸಮರ್ಥಿಸಿಕೊಂಡಿದೆ.
ಜಪಾನ್ ಮೂಲದ ಈ ವಾಹನ ತಯಾರಕ ಕಂಪನಿ, ಭಾರತದಲ್ಲಿ ಟೊಯೋಟಾ ಗ್ಲಾನ್ಜಾ ಜೊತೆಗೆ ಫಾರ್ಚುನರ್, ಇನ್ನೋವಾ ಕ್ರಿಸ್ಟಾ, ಕ್ಯಾಮ್ರಿ, ವೆಲ್‌ಫೈರ್ ಮತ್ತು ಅರ್ಬನ್ ಕ್ರೂಸರ್ ಸೇರಿದಂತೆ 6 ಮಾದರಿ ಕಾರುಗಳನ್ನು ಮಾರಾಟ ಮಾಡುತ್ತಿದೆ. 2022ರ ಗ್ಲಾನ್ಜಾ ಮಾಡೆಲ್ ಇತ್ತೀಚೆಗಷ್ಟೆ ಬಿಡುಗಡೆಯಾಗಿದೆ. ಶೀಘ್ರದಲ್ಲೇ ಟೊಯೊಟಾ ಕಂಪನಿಯ ಹೊಸ ವಾಹನ ಹಿಲಕ್ಸ್ ಪಿಕಪ್ ಟ್ರಕ್, ಮಾರುಕಟ್ಟೆಗೆ ಬರಲಿದೆ.
ಇದು ಅತ್ಯಂತ ಗಟ್ಟಿಮುಟ್ಟಾದ ವಾಹನ. ಆಫ್ ರೋಡ್ ನಲ್ಲೂ ಬಿಂದಾಸ್ ಆಗಿ ಚಲಿಸಬಲ್ಲದು. ಭಾರೀ ಬೇಡಿಕೆಯಿದ್ದರೂ ಟೊಯೊಟಾ ಕಂಪನಿ ಈ ಪಿಕಪ್ ಗಾಗಿ ಮುಂಗಡ ಬುಕ್ಕಿಂಗ್ ತೆಗೆದುಕೊಳ್ಳುವುದನ್ನು ನಿಲ್ಲಿಸಿದೆ. ಅದಕ್ಕೆ ನಿರ್ದಿಷ್ಟ ಕಾರಣಗಳನ್ನು ನೀಡಿಲ್ಲ. ಟೊಯೊಟಾ ಮಾತ್ರವಲ್ಲ BMW, Audi ಮತ್ತು Mercedes-Benz ಸೇರಿದಂತೆ ಇನ್ನೂ ಅನೇಕ ಕಂಪನಿಗಳು ಭಾರತದಲ್ಲಿ ಕಾರುಗಳ ಬೆಲೆ ಹೆಚ್ಚಿಸುವುದಾಗಿ ಘೋಷಿಸಿವೆ.