ನಮ್ಮ ಒಂದು ಕ್ಷಣದ ನಿರ್ಲಕ್ಷ್ಯ ದೊಡ್ಡ ಅನಾಹುತಕ್ಕೇ ಸಾಕ್ಷಿಯಾಗಬಹುದು. ನಮ್ಮನ್ನು ಅಲರ್ಟ್ ಮಾಡುವಂತಹ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇರುತ್ತವೆ. ಬೈಕ್‌ಗಳ ಅಪಘಾತ, ವಾಹನ ಬರುತ್ತಿರುವುದನ್ನು ಗಮನಿಸದೇ ಕಾರಿನ ಬಾಗಿಲು ತೆರೆಯುವುದು ಹೀಗೆ ಒಂದಿಲ್ಲೊಂದು ಘಟನೆಗಳು ಆಗಾಗ ಸಂಭವಿಸುತ್ತಿರುತ್ತವೆ.
ಕರ್ನಾಟಕ ರಸ್ತೆ ಸುರಕ್ಷತಾ ಪ್ರಾಧಿಕಾರ ವಿಡಿಯೋ ಒಂದನ್ನು ಶೇರ್ ಮಾಡಿದೆ. ಕಾರ್ ಚಾಲಕನ ಬೇಜವಾಬ್ಧಾರಿತನಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಅತ್ತಿತ್ತ ನೋಡದೆಯೇ ಕಾರು ಚಾಲಕ ದಿಢೀರನೆ ಬಾಗಿಲು ತೆಗೆದಿದ್ದರಿಂದ ಭೀಕರ ಅಪಘಾತ ಸಂಭವಿದೆ.
ಕಾರಿನ ಬಾಗಿಲಿಗೆ ಡಿಕ್ಕಿಯಾಗಿ ಮೋಟಾರ್ ಸೈಕಲ್ ಅಪಘಾತಕ್ಕೀಡಾಗಿದೆ. ಬೈಕ್‌ನಲ್ಲಿದ್ದ ಮಹಿಳೆ ಕೆಳಗೆ ಬಿದ್ದಿದ್ದು, ಹಿಂದಿನಿಂದ ಬರ್ತಾ ಇದ್ದ ಕಾರು ಆಕೆಯ ಮೇಲೆ ಹರಿದಿದೆ. ಕಾರು ಚಾಲಕ ಹಿಂದಿನಿಂದ ವಾಹನ ಬರುತ್ತಿದೆಯೇ ಎಂಬುದನ್ನು ಗಮನಿಸದೆಯೇ ಬಾಗಿಲು ತೆರೆದಿದ್ದರಿಂದ ನಡೆದ ಅನಾಹುತ ಇದು. ಹಾಗಾಗಿ ಸಾರ್ವಜನಿಕ ರಸ್ತೆಗಳಲ್ಲಿ ಜಾಗರೂಕತೆ ವಹಿಸಬೇಕೆಂದು ಪ್ರಾಧಿಕಾರ ವಾಹನ ಸವಾರರನ್ನು ಎಚ್ಚರಿಸಿದೆ.