ಕಾರು ಖರೀದಿಸುವುದು ಪ್ರತಿಯೊಬ್ಬರ ಕನಸು. ಅನೇಕರಿಗೆ ಈ ಕನಸು ನನಸಾಗುವುದೇ ಇಲ್ಲ. ಏಕೆಂದರೆ ಕಾರು ಕೊಂಡುಕೊಳ್ಳುವುದು ದುಬಾರಿ ವ್ಯವಹಾರವಾಗಿದೆ. ನಮ್ಮ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕಾರನ್ನು ಖರೀದಿಸುವ ಬಗ್ಗೆ ಯೋಚಿಸಬೇಕು. ಕಾರು ಕೊಳ್ಳುವ ಮುನ್ನ ಕೆಲವು ಸಂಗತಿಗಳನ್ನು ಗಮನಿಸಬೇಕು. ಕಾರು ಖರೀದಿಗೂ ಮೊದಲು ಬಜೆಟ್ ಅನ್ನು ಹೊಂದಿಸಿ.
ಕಾರಿಗೆ ನೀವು ಖರ್ಚು ಮಾಡಬಹುದಾದ ಮೊತ್ತದ ಬಗ್ಗೆ ಸ್ಪಷ್ಟತೆ ಇರಬೇಕು. ಯಾವುದೇ ನಿರ್ದಿಷ್ಟ ಕಾರಿನ ಮೇಲೆ ಕಣ್ಣಿಟ್ಟಿದ್ದರೆ, ನಿಮ್ಮ ಬಳಿಯಿರುವ ಹಣ ಅದನ್ನು ಖರೀದಿಸಲು ಸಾಕೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಮೊದಲು ಉಳಿದ ಖರ್ಚುಗಳನ್ನು ಲೆಕ್ಕ ಹಾಕಿ, ನಂತರ ಕಾರಿಗೆ ಎಷ್ಟು ಹಣವನ್ನು ವೆಚ್ಚ ಮಾಡಬಹುದು ಎಂಬುದನ್ನು ನಿರ್ಧರಿಸಿ.ನಿಮಗೆ ಯಾವ ರೀತಿಯ ಕಾರು ಬೇಕು ಎಂಬುದನ್ನು ನಿರ್ಧರಿಸಿ.
ನಿಮ್ಮ ಅಗತ್ಯತೆಗಳು, ಸಂದರ್ಭಗಳು, ಜೀವನಶೈಲಿ ಮತ್ತು ಅಭಿರುಚಿಗೆ ಸರಿಹೊಂದುವ ಕಾರನ್ನು ಆರಿಸಿಕೊಳ್ಳಬೇಕು. ಆಸನ, ಸ್ಪೇಸ್, ಸೌಕರ್ಯ, ಅನುಕೂಲತೆ, ಕಾರ್ಯಕ್ಷಮತೆ ಮತ್ತು ಸುರಕ್ಷತೆ ವೈಶಿಷ್ಟ್ಯಗಳನ್ನೆಲ್ಲ ಗಮನಿಸಿಯೇ ಕಾರನ್ನು ಆಯ್ಕೆ ಮಾಡಿ. ಡೀಸೆಲ್ ಎಂಜಿನ್ ಕಾರು ಬೇಕೆ ಅಥವಾ ಪೆಟ್ರೋಲ್ ಎಂಜಿನ್ ಹೊಂದಿರುವ ಕಾರು ಸೂಕ್ತವೇ ಎಂಬುದನ್ನು ಕೂಡ ನಿರ್ಧರಿಸಿ.
ಕಾರಿನ ಮರುಮಾರಾಟದ ಮೌಲ್ಯದ ಬಗ್ಗೆಯೂ ನೀವು ತಿಳಿದಿರಬೇಕು. ಭವಿಷ್ಯದಲ್ಲಿ ಕಾರನ್ನು ಮಾರಾಟ ಮಾಡಬೇಕದಾಗ ಅದರಿಂದ ಎಷ್ಟು ಮೊತ್ತ ಬರಬಹುದು ಎಂಬುದನ್ನೂ ಅಂದಾಜಿಸಿಕೊಳ್ಳಿ. ಮರುಮಾರಾಟ ಮೌಲ್ಯದ ಆಧಾರದ ಮೇಲೆ ಕಾರನ್ನು ಖರೀದಿಸುವುದು ಉತ್ತಮ.