ಕಾರಿನ ರಿಪೇರಿ ವೆಚ್ಚ ಅಸಲಿ ಬೆಲೆಗಿಂತ ದುಪ್ಪಟ್ಟಾಗಿದ್ರೆ ಹೇಗಿರಬಹುದು ಹೇಳಿ? ಬೆಂಗಳೂರಿನ ನಿವಾಸಿಯೊಬ್ಬರಿಗೆ ಇಂಥದ್ದೇ ವಿಲಕ್ಷಣ ಅನುಭವವಾಗಿದೆ. ಕಳೆದ ತಿಂಗಳು ಸಿಲಿಕಾನ್ ಸಿಟಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಪ್ರವಾಹ ಸೃಷ್ಟಿಯಾಗಿತ್ತು. ಪರಿಣಾಮ ಅನೇಕ ವಾಹನಗಳು, ಮನೆಗಳು ಜಲಾವೃತವಾಗಿದ್ದವು.
ಅಮೇಜಾನ್ ಉದ್ಯೋಗಿಯಾಗಿರೋ ಅನಿರುದ್ಧ್ ಗಣೇಶ್ ಅವರ ಕಾರು ಕೂಡ ನೀರಿನಲ್ಲಿ ಮುಳುಗಿತ್ತು. ಕೆಟ್ಟು ನಿಂತಿದ್ದ ಕಾರನ್ನು ರಿಪೇರಿ ಮಾಡಿಸಲು ಅನಿರುದ್ಧ್ ಮುಂದಾಗಿದ್ದಾರೆ. ರಿಪೇರಿಗಾಗಿ ಎಲ್ಲಾ ವಿವರಗಳನ್ನು ಅವರು ಸಂಗ್ರಹಿಸಿದ್ದಾರೆ.
ವೈಟ್‌ಫೀಲ್ಡ್‌ನ ವೋಕ್ಸ್‌ವ್ಯಾಗನ್ ಡೀಲರ್ ಶಿಪ್‌ನಿಂದ ಕಾರು ದುರಸ್ತಿಗಾಗಿ 22 ಲಕ್ಷ ರೂಪಾಯಿ ವೆಚ್ಚವಾಗುತ್ತದೆ ಎಂದು ಅವರಿಗೆ ಅಂದಾಜು ಮೊತ್ತವನ್ನು ತಿಳಿಸಲಾಗಿದೆ. ವಿಪರ್ಯಾಸ ಅಂದ್ರೆ ಕೆಟ್ಟು ನಿಂತಿದ್ದ ಆ ಕಾರಿನ ಅಸಲಿ ಬೆಲೆ ಅದರ ಅರ್ಧದಷ್ಟಿತ್ತು.
ವೋಕ್ಸ್‌ವ್ಯಾಗನ್ ಕಂಪನಿಯ ಎಸ್ಟಿಮೇಶನ್ ನೋಡಿ ಕಂಗಾಲಾದ ಅನಿರುದ್ಧ್ ಕೂಡಲೇ ಇನ್ಷೂರೆನ್ಸ್ ಕಂಪನಿಯನ್ನು ಸಂಪರ್ಕಿಸಿದ್ದಾರೆ. ಕಾರು ಸಂಪೂರ್ಣ ನಾಶವಾಗಿರುವುದಾಗಿ ವಿಮಾ ಕಂಪನಿ ದೃಢಪಡಿಸಿದೆ. ನಂತರ ಶೋರೂಂನಿಂದ ಕಾರು ಬಿಡಿಸಿಕೊಳ್ಳಲು 44,840 ರೂಪಾಯಿ ಅಂದಾಜು ಶುಲ್ಕವಾಗಿ ಪಾವತಿಸುವಂತೆ ಅನಿರುದ್ಧ್‌ಗೆ ಸೂಚಿಲಾಯ್ತು. ಉದ್ಯಮದ ಮಾನದಂಡಗಳ ಪ್ರಕಾರ 5,000 ರೂಪಾಯಿ ಶುಲ್ಕ ಪಡೆಯಬೇಕು.
ಈ ವಿಷಯದ ಬಗ್ಗೆ ಅವರು ಫೋಕ್ಸ್‌ವ್ಯಾಗನ್ ಇಂಡಿಯಾಗೆ ಕರೆ ಮಾಡಿ ಇಮೇಲ್ ಸಹ ಮಾಡಿದ್ದರು. ನಂತರ ಸಂಪೂರ್ಣ ಘಟನೆಯನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವೋಕ್ಸ್‌ವ್ಯಾಗನ್ ಇಂಡಿಯಾದ ಅಧಿಕಾರಿ ವಿಶಾಲ್ ಭಟ್ ಪ್ರತಿಕ್ರಿಯಿಸಿ, ಈ ವಿಷಯವನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದರು. ಅಂತಿಮವಾಗಿ ಅನಿರುದ್ಧ್ 5,000 ರೂಪಾಯಿ ಪಾವತಿಸಿ ಕಾರನ್ನು ಮರಳಿ ಪಡೆದಿದ್ದಾರೆ.