ದೆಹಲಿ: ಕಾರಿನೊಳಗೆ ಮಾಸ್ಕ್ ಕಡ್ಡಾಯಗೊಳಿಸಿದ ಸರ್ಕಾರದ ಆದೇಶವನ್ನು ದೆಹಲಿ ಹೈಕೋರ್ಟ್ ಅಸಂಬದ್ಧ ಎಂದು ಹೇಳಿದೆ.
ಖಾಸಗಿ ಕಾರಿನಲ್ಲಿ ಏಕಾಂಗಿಯಾಗಿ ಪ್ರಯಾಣಿಸುವಾಗ ಮಾಸ್ಕ್ ಧರಿಸದಿದ್ದಕ್ಕಾಗಿ ವ್ಯಕ್ತಿಯೊಬ್ಬರ ಮೇಲೆ 500 ರೂ. ದಂಡ ವಿಧಿಸಲಾಗಿತ್ತು. ಇದನ್ನು ಪ್ರಶ್ನಿಸಿ 2020 ರಲ್ಲಿ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್, ಕಾರಿನಲ್ಲಿ ಪ್ರಯಾಣಿಸುವವರು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿರುವ ದೆಹಲಿ ಸರ್ಕಾರದ ಆದೇಶವನ್ನು ಅಸಂಬದ್ಧ ಎಂದು ಬಣ್ಣಿಸಿದೆ. ಈ ಆದೇಶವು ಏಕೆ ಚಾಲ್ತಿಯಲ್ಲಿದೆ ಮತ್ತು ಅದನ್ನು ಏಕೆ ಹಿಂತೆಗೆದುಕೊಳ್ಳುತ್ತಿಲ್ಲ ಎಂದು ರಾಜ್ಯ ಸರ್ಕಾರವನ್ನು ಕೋರ್ಟ್ ಪ್ರಶ್ನಿಸಿದೆ.
ಕಾರಿನಲ್ಲಿ ಏಕಾಂಗಿಯಾಗಿ ಪ್ರಯಾಣಿಸುವಾಗ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂಬ ಆದೇಶ ಹೊರಡಿಸಿರುವುದು ವಾಸ್ತವವಾಗಿ ಅಸಂಬದ್ಧವಾಗಿದೆ. ನೀವು ನಿಮ್ಮ ಸ್ವಂತ ಕಾರಿನಲ್ಲಿ ಕುಳಿತಿದ್ದೀರಿ. ಈ ವೇಳೆ ನೀವು ಮುಖಗವಸನ್ನು ಧರಿಸಬೇಕೇ ಎಂದು ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ಜಸ್ಮೀತ್ ಸಿಂಗ್ ಅವರ ವಿಭಾಗೀಯ ಪೀಠವು ಪ್ರಶ್ನಿಸಿದೆ.
ಕೋವಿಡ್ ಪರಿಸ್ಥಿತಿಯಲ್ಲಿನ ಬದಲಾವಣೆಯ ಹಿನ್ನೆಲೆಯಲ್ಲಿ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ತನ್ನ ವಿವಿಧ ಮಾರ್ಗಸೂಚಿಗಳನ್ನು ಮರುಪರಿಶೀಲಿಸಬೇಕೆಂದು ಕೋರ್ಟ್ ಆದೇಶಿಸಿದೆ.