ದಕ್ಷಿಣ ಕನ್ನಡ ಜಿಲ್ಲೆ ಅಂದ್ರೆ ನೆನಪಾಗುವುದು ಅಲ್ಲಿನ ಪ್ರಸಿದ್ಧ ದೇವಸ್ಥಾನಗಳು. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಸೌತಡ್ಕ ಮಾತ್ರವಲ್ಲದೆ ಇನ್ನೂ ಹಲವಾರು ಪ್ರಸಿದ್ಧ ದೇವಸ್ಥಾನಗಳು ಇಲ್ಲಿವೆ. ಹೌದು, ಕೊಡ್ಯಮಲೆ ದಟ್ಟಾರಣ್ಯದ ಸಾಲಿನಲ್ಲಿ ಇರುವ ಶ್ರೀ ಕಾರಿಂಜೇಶ್ವರ ದೇವಸ್ಥಾನವು ಸಮುದ್ರಮಟ್ಟದಿಂದ ಸುಮಾರು 1000 ಅಡಿಗಳ ಎತ್ತರದಲ್ಲಿದೆ. ಇದೊಂದು ಪುರಾತನ ಹಾಗೂ ಪವಿತ್ರ ತಾಣವೆಂದೇ ಪರಿಗಣಿಸಲ್ಪಟ್ಟಿದ್ದು, ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.
ಬಿ.ಸಿ.ರೋಡಿನಿಂದ ಕೇವಲ 15 ಕಿ.ಮೀ ದೂರ ಇರುವ ಈ ಕ್ಷೇತ್ರಕ್ಕೆ ಬಂಟ್ವಾಳ-ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ಸಾಗಬೇಕು. ಈ ವೇಳೆ ವಗ್ಗ ಅನ್ನುವ ಸ್ಥಳದಲ್ಲಿ ದೇಗುಲದ ಮಹಾದ್ವಾರ ಕಾಣಿಸುತ್ತದೆ. ಇದರೊಳಗಿನಿಂದ ಹೊರಟರೆ ಕೇವಲ 2.4 ಕಿ.ಮೀ ದೂರವಿರುವ ದಟ್ಟ ಕಾನನದ ನಡುವೆ ಸಾಗಿದಾಗ ಸಿಗುವುದೇ ಕಾರಿಂಜೇಶ್ವರ ಬೆಟ್ಟ.
ಬೆಟ್ಟವು ಬೃಹತ್ ಬಂಡೆಗಳಿಂದ ಆವೃತವಾಗಿದ್ದು, ಕಪಿಗಳಿಗೆ ಆಶ್ರಯ ತಾಣವಾಗಿದೆ. ದೂರದಿಂದ ವೀಕ್ಷಿಸಿದಾಗ ಏಕಶಿಲಾ ಬೆಟ್ಟದಂತೆ ಭಾಸವಾಗುತ್ತದೆ. ಶಿವನಿಗೂ, ಪಾರ್ವತಿಗೂ ಪ್ರತ್ಯೇಕ ದೇವಸ್ಥಾನವಿರುವುದು ಇಲ್ಲಿನ ವೈಶಿಷ್ಟ್ಯ. ಗುಡ್ಡದ ನಡುವೆ ಪಾರ್ವತಿ ಹಾಗೂ ಗುಡ್ಡದ ತುತ್ತ ತುದಿಯಲ್ಲಿ ಶಿವನಿಗೆ ಶಿಲಾಮಯ ಗರ್ಭಗುಡಿಯಿದೆ.
ಬೆಟ್ಟದ ಕೆಳಗೆ ಗದೆಯ ಆಕಾರದಲ್ಲಿ ವಿಶಾಲವಾದ ‘ಗದಾತೀರ್ಥ’ ಕಾಣಸಿಗುತ್ತದೆ. ಈ ಶುದ್ಧ ನೀರಿನ ಕೊಳವು ಸುಮಾರು 237 ಮೀ. ಉದ್ದ ಹಾಗೂ 55 ಮೀ. ಅಗಲವಿದೆ. ಗದಾತೀರ್ಥವನ್ನು ಮಹಾಭಾರತ ಸಮಯದಲ್ಲಿ ಭೀಮಸೇನ ನಿರ್ಮಿಸಿದ ಎಂಬ ನಂಬಿಕೆಯಿದೆ. ಇಲ್ಲಿ ಜಲಪ್ರೋಕ್ಷಣೆ ಮಾಡಿಕೊಂಡು ಬೆಟ್ಟ ಹತ್ತಲು ಶುರುಮಾಡಬಹುದು. ಕೆರೆಯ ಪಕ್ಕದಲ್ಲೇ ವಿಶಾಲವಾದ ಅಶ್ವತ್ತವೃಕ್ಷ ಹಾಗೂ ಮುಚ್ಚಿಹೋಗಿರುವ ಪುರಾತನ ಗುಹೆಯೊಂದಿದೆ. ದೇಗುಲದ ಪಕ್ಕದಲ್ಲಿರುವ ‘ಹಂದಿಕೆರೆ’ಯು ಅರ್ಜುನನಿಂದಾಗಿ ಉಂಟಾಯಿತು ಎಂಬ ಕತೆಯಿದೆ. ಅಲ್ಲದೆ ಉಂಗುಷ್ಟ ತೀರ್ಥ, ಜಾನು ತೀರ್ಥ ಎಂಬ ಪುಟ್ಟ ಕೆರೆಗಳು ಕೂಡ ಸಿಗುತ್ತದೆ. ಇವನ್ನು ಕೂಡ ಭೀಮಸೇನ ನಿರ್ಮಿಸಿದ ಎಂಬ ನಂಬಿಕೆಯಿದೆ. ವರ್ಷದ ಎಲ್ಲಾ ದಿನ ಬೆಟ್ಟದ ತುದಿಯಲ್ಲಿರುವ ಈ ಕೆರೆಗಳಲ್ಲಿ ನೀರು ಬತ್ತದಿರುವುದು ಇಲ್ಲಿನ ವಿಶೇಷ.
ದೇವಾಲಯವನ್ನು ತಲುಪಲು ಸುಮಾರು 355 ಮೆಟ್ಟಿಲುಗಳಿವೆ. ಇಲ್ಲಿಂದ ಬೃಹತ್ ಬಂಡೆಯ ಮೆಟ್ಟಿಲು ಏರುತ್ತಾ ಸಾಗಿದರೆ ಪಾರ್ವತಿ ಗುಡಿ ಸಿಗುತ್ತದೆ. ಪಾರ್ವತಿ ದೇವಿ ದರ್ಶನದ ನಂತರ ತೀರಾ ಕಡಿದಾದ ಸುಸಜ್ಜಿತ ಮೆಟ್ಟಿಲುಗಳನ್ನು ಹತ್ತಿ ಹೋದರೆ ಅಲ್ಲಿ ‘ಉಕ್ಕಡದ ಬಾಗಿಲು’ ಕಾಣಸಿಗುತ್ತದೆ. ಇದು ಕಲ್ಲಿನಿಂದ ಮಾಡಿದ ದ್ವಾರವಾಗಿದ್ದು, ಅಲ್ಲಿಂದ ಮುಂದಕ್ಕೆ ಬಂಡೆ ಹಾಗೂ ಕುರುಚಲು ಮರ-ಗಿಡಗಳ ನಡುವೆ ಮೆಟ್ಟಿಲುಗಳನ್ನು ಹತ್ತುತ್ತಾ ಸಾಗಿದರೆ ಬೆಟ್ಟದ ತುದಿಯಲ್ಲಿದೆ ಶಿಲಾಮಯ ಶಿವ ದೇವಸ್ಥಾನ. ನಡು-ನಡುವೆ ನಿಮಗೆ ವಾನರ ಸೇನೆಯೂ ಸ್ವಾಗತಿಸುತ್ತದೆ.
ತುಳು ಪರಂಪರೆಯ ಆಷಾಢ (ಆಟಿ) ಅಮವಾಸ್ಯೆ ಮತ್ತು ಶ್ರಾವಣ (ಸೋನ) ಅಮವಾಸ್ಯೆಯಂದು ಇಲ್ಲಿ ಭಕ್ತರು ತೀರ್ಥ ಸ್ನಾನ ಮಾಡುತ್ತಾರೆ. ಮುಂಜಾನೆಯೇ ಅಸಂಖ್ಯಾತ ಭಕ್ತರು ಜಿಲ್ಲೆಯ ನಾನಾ ಕಡೆಗಳಿಂದ ಬಂದು ದೇವರ ದರ್ಶನ ಪಡೆಯುತ್ತಾರೆ. ಶಿವರಾತ್ರಿ ಇಲ್ಲಿನ ಪ್ರಧಾನ ಉತ್ಸವವಾಗಿದೆ. ಇದು ನಾಲ್ಕು ದಿನಗಳ ಕಾಲ ನಡೆಯುತ್ತದೆ. ಜಾತ್ರೆ ವೇಳೆ ಗುಡ್ಡದ ಮೇಲಿನಿಂದ ಶಿವನ ವಿಗ್ರಹವನ್ನು ಪಾರ್ವತಿ ದೇವಸ್ಥಾನಕ್ಕೆ ತರುವ ಮೂಲಕ ಶಿವ-ಪಾರ್ವತಿಯರ ಭೇಟಿ ನಡೆಯುತ್ತದೆ. ಪೌರಾಣಿಕ ಕಥೆಯ ಪ್ರಕಾರ ಶಿವನು ಪಾರ್ವತಿಯ ಸಂಗ ಬಯಸಿ ಮೇಲಿನ ಬೆಟ್ಟದಿಂದ ಬಹಳ ಆತುರದಿಂದ ಇಳಿದು ಬರುತ್ತಾನೆ. ಆದರೆ ಇಲ್ಲಿ ಬಂದು ತಲಪಿದಾಗ ಪಾರ್ವತಿಯು ರಜಸ್ವಲೆಯಾಗಿರುವುದು ತಿಳಿದು, ಅತೀ ವೇಗದಲ್ಲಿ ಆ ಕಡಿದಾದ ಬೆಟ್ಟವನ್ನು ಏರಿ ತನ್ನ ಸ್ಥಾನವನ್ನು ಸೇರುತ್ತಾನೆ. ಇದನ್ನು ಈಗಲೂ ಉತ್ಸವದ ಸಮಯದಲ್ಲಿ ಅರ್ಚಕರು ದೇವರ ವಿಗ್ರಹವನ್ನು ತಲೆಯಲ್ಲಿ ಹೊತ್ತುಕೊಂಡು ಕಡಿದಾದ ಬೆಟ್ಟವನ್ನು ಓಡಿಕೊಂಡೇ ಹೋಗುವುದು ನಡೆದುಕೊಂಡು ಬಂದಿರುವುದು ಇಲ್ಲಿನ ವಿಶೇಷವಾಗಿದೆ.
ಬೆಟ್ಟದ ತುದಿಯ ಶಿವ ದೇವಸ್ಥಾನದಿಂದ ನಾಲ್ಕೂ ದಿಕ್ಕಿನಲ್ಲಿ ಹಚ್ಚ ಹಸಿರು ದೃಶ್ಯ ವೈಭವ ಕಾಣಬಹುದಾಗಿದೆ. ಇಲ್ಲಿಂದ ಕೆಳಗಿನ ಬೃಹತ್ ಶಿಲಾಬೆಟ್ಟದತ್ತ ಕೂಗಿಕೊಂಡರೆ ಸ್ಪಷ್ಟ ಪ್ರತಿಧ್ವನಿ ನೀಡುವ ಪ್ರತಿಧ್ವನಿ ಕಲ್ಲು ಇರುವುದು ಇಲ್ಲಿನ ವೈಶಿಷ್ಟಗಳಲ್ಲಿ ಒಂದಾಗಿದೆ. ಅಲ್ಲದೆ ದೇವಸ್ಥಾನದ ಸುತ್ತಮುತ್ತ ಚಾರಣ ಕೈಗೊಳ್ಳಬಹುದಾದ ಸಾಕಷ್ಟು ತಾಣಗಳಿವೆ.