ಕಣ್ಣಿನ ಒಳಭಾಗ ಹಳದಿ ಆಗಿ, ಚರ್ಮ ಪೀತ ವರ್ಣ ಲೇಪಿತವಾದಂತೆ ಕಂಡು, ಮೂತ್ರ ಅರಿಶಿನ ರೂಪದಲ್ಲಿ ಮಾರ್ಪಟ್ಟಾಗ ಅದನ್ನು ಕಾಮಾಲೆ ರೋಗ ಎಂದು ಪರಿಗಣಿಸಿ ಚಿಕಿತ್ಸೆ ನೀಡಲಾಗುತ್ತದೆ.
ಜಾಂಡೀಸ್ ಕಂಡು ಬಂದ ರೋಗಿಯನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ತಣ್ಣೀರನ್ನು ಮುಟ್ಟಗೊಡದೆ, ಎಣ್ಣೆ ಪದಾರ್ಥಗಳನ್ನು ತಿನ್ನದೆ ಮಾಂಸಾಹಾರ, ಮದ್ಯ ಸೇವನೆಯನ್ನು ಕೈಬಿಟ್ಟು ಕಠಿಣ ವೃತ ಮಾಡಲಾಗುತ್ತದೆ. ಈ ರೋಗ ರೋಗಿಯ ಜೀವನ ಶೈಲಿಯನ್ನು ಬದಲಿಸುತ್ತದೆ.
ಹಳದಿ ಬಣ್ಣ ಕಡಿಮೆಯಾಗಿ ಕಣ್ಣು ತಿಳಿಯಾಗಿ, ಮೈ ಬಣ್ಣ ಮೊದಲಿನ ಸ್ಥಿತಿಗೆ ತಲುಪಿ ಮತ್ತು ಹಳದಿ ಬಣ್ಣದ ಮೂತ್ರ ಬಿಳಿ ಬಣ್ಣಕ್ಕೆ ತಿರುಗಿದಾಗ ವ್ಯಕ್ತಿಗೆ ಕಾಮಾಲೆ ಹೋಯ್ತು ಎಂಬುದು ದೃಢವಾಗುತ್ತದೆ. ನಿರ್ದಿಷ್ಟ ಅವಧಿ ಕಳೆದ ನಂತರ ತಾನಾಗಿಯೇ ಹಳದಿ ರೋಗದ ಲಕ್ಷಣಗಳು ಕಡಿಮೆಯಾಗುತ್ತದೆ. ಸಾಮಾನ್ಯವಾಗಿ ರೋಗಿ ವಾಂತಿ, ವಿಪರೀತ ಜ್ವರದಿಂದ ಬಳಲುತ್ತಾ, ನಿಶ್ಯಕ್ತಿಯಿಂದ ಸಮಸ್ಯೆ ಅನುಭವಿಸುತ್ತಾನೆ. ಇದಕ್ಕೆ ಆಯುರ್ವೇದ ಅಥವಾ ನಾಟಿ ಮದ್ದನ್ನು ಮಾಡಿ ಆರೋಗ್ಯ ಪಡೆದುಕೊಳ್ಳುವವರೇ ಹೆಚ್ಚು.