22ನೇ ಆವೃತ್ತಿಯ ಕಾಮನ್ವೆಲ್ತ್ ಗೇಮ್ಸ್ ಬರ್ಮಿಂಗ್ ಹ್ಯಾಮ್ ನಲ್ಲಿ ಆರಂಭವಾಗಲಿದ್ದು, ಅದಕ್ಕೆ ಇಂದಿನಿಂದ ಚಾಲನೆ ದೊರೆಯಲಿದೆ. ಭಾರತೀಯ ಕಾಲಮಾನ ರಾತ್ರಿ 11:30ಕ್ಕೆ ಅದ್ದೂರಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಈ ವೇಳೆ 30,000ಕ್ಕೂ ಅಧಿಕ ಪ್ರೇಕ್ಷಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ರಾಣಿ ಎಲಿಜಬೆತ್ ಅನುಪಸ್ಥಿತಿಯಲ್ಲಿ ರಾಜಕುಮಾರ ಚಾರ್ಲ್ಸ್ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ರಾಣಿ ಎಲಿಜಬೆತ್ ಬಕಿಂಗ್ ಹ್ಯಾಮ್ ಅರಮನೆಯಿಂದಲೇ ಸಂದೇಶವನ್ನು ಓದುವ ಮೂಲಕ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ.
ಉದ್ಘಾಟನಾ ಸಮಾರಂಭದ ವೇಳೆ ಲೇಸರ್ ಶೋ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಇದಕ್ಕೂ ಮುನ್ನ 72 ರಾಷ್ಟ್ರಗಳಿಂದ ಆಗಮಿಸಿರುವ ಕ್ರೀಡಾಪಟುಗಳು ಪಥ ಸಂಚಲನ ನಡೆಸಲಿದ್ದಾರೆ.
ಉದ್ಘಾಟನಾ ಸಮಾರಂಭದ ವೇಳೆ ನಡೆಯುವ ಪಥ ಸಂಚಲನದಲ್ಲಿ ಒಲಂಪಿಕ್ಸ್ ಪದಕ ವಿಜೇತೆ ಪಿ.ವಿ. ಸಿಂಧು ಭಾರತದ ಧ್ವಜ ಧಾರಿಣಿಯಾಗಲಿದ್ದು, ಗಾಯದ ಕಾರಣಕ್ಕೆ ನೀರಜ್ ಚೋಪ್ರಾ ಕಾಮನ್ವೆಲ್ತ್ ಕ್ರೀಡಾಕೂಟದಿಂದ ಹೊರ ಬಿದ್ದಿರುವ ಹಿನ್ನೆಲೆಯಲ್ಲಿ ಪಿ.ವಿ. ಸಿಂಧು ಅವರಿಗೆ ಈ ಅವಕಾಶ ಒದಗಿ ಬಂದಿದೆ.