ಕಾನೂನು ಮಹಿಳೆಯರ ಅನುಕೂಲತೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕಾಗಿದೆ. ಹೆಚ್ಚಿನ ರಕ್ಷಣೆಯ ಅಗತ್ಯವಿರುವ ಸಮಾಜದ ದುರ್ಬಲ ವರ್ಗ ಅದು ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಕೌಟುಂಬಿಕ ಕಲಹವೊಂದಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣದ ವಿಚಾರಣೆಯನ್ನು ಪುಣೆಯಿಂದ ಥಾಣೆಗೆ ವರ್ಗಾಯಿಸಿಕೊಡುವಂತೆ ಮಹಿಳೆಯೊಬ್ಬರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಸಂದರ್ಭದಲ್ಲಿ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿ ಎಸ್.ಎಂ.ಮೋದಕ್ ಅವರಿದ್ದ ಪೀಠ ಅರ್ಜಿ ವಿಚಾರಣೆ ನಡೆಸಿತು. ವೈವಾಹಿಕ ಕಲಹಕ್ಕೆ ಸಂಬಂಧಪಟ್ಟಂತೆ ಪತಿ ಹಾಗೂ ಪತ್ನಿ ಥಾಣೆ ಮತ್ತು ಪುಣೆಯಲ್ಲಿ ಪ್ರತ್ಯೇಕ ಅರ್ಜಿಗಳನ್ನು ದಾಖಲಿಸಿದ್ದಾರೆ.
ಪುಣೆ ನಿವಾಸಿಯಾಗಿರುವ ಪತಿ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ, ಥಾಣೆ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿಯನ್ನು ಪುಣೆಯ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿದ್ದಾನೆ. ನವಿ ಮುಂಬೈ ನಿವಾಸಿಯಾಗಿರುವ ಪತ್ನಿ ಪುಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ಥಾಣೆ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿದ್ದರು. ಪತಿ ಪರ ವಾದ ಮಂಡಿಸಿದ ವಕೀಲೆ ಸಂಗೀತಾ ಸಾಲ್ವಿ, ಇಬ್ಬರು ಅಪ್ರಾಪ್ತ ಮಕ್ಕಳ ಜವಾಬ್ಧಾರಿ ಆತನ ಮೇಲಿದೆ. ಮಕ್ಕಳನ್ನು ತಾಯಿ, ಚಿಕ್ಕಮ್ಮ ಮತ್ತು ಸೋದರ, ಸೋದರಿ ನೋಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಪದೇ ಪದೇ ಥಾಣೆಗೆ ಪ್ರಯಾಣಿಸಲು ಸಾಧ್ಯವಿಲ್ಲ ಎಂದರು.
ಪತ್ನಿ ಪರ ವಾದ ಮಂಡಿಸಿದ ವಕೀಲ ಅಕ್ಷಯ್ ಕಪಾಡಿಯಾ, ಆಕೆ ಉದ್ಯೋಗಿಯಲ್ಲ, ಹೀಗಾಗಿ ಪುಣೆಗೆ ತೆರಳಲು ಸಾಧ್ಯವಿಲ್ಲ ಎಂದು ಹೇಳಿದರು. ದಂಪತಿ 2021 ರಿಂದಲೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಹೆಂಡತಿಯ ಪ್ರಯಾಣ ವೆಚ್ಚವನ್ನು ಭರಿಸುವಲ್ಲಿ ಪತಿ ಪ್ರಾಮಾಣಿಕತೆ ಮೆರೆದಿರುವುದು ನ್ಯಾಯಮೂರ್ತಿಗಳ ಗಮನಕ್ಕೆ ಬಂದಿದೆ. ಆದಾಗ್ಯೂ ಪುಣೆ ನ್ಯಾಯಾಲಯಕ್ಕೆ ಹಾಜರಾಗಲು ಪತ್ನಿಗೆ ಹೆಚ್ಚಿನ ಆರ್ಥಿಕ ಸೌಲಭ್ಯವಿದೆ ಎಂಬುದನ್ನು ಪತಿ ಸಾಬೀತು ಮಾಡಿಲ್ಲ. ಜೊತೆಗೆ ಆಕೆಗೆ ಎಲ್ಲಾ ರೀತಿಯ ಸಾರಿಗೆ ವ್ಯವಸ್ಥೆಯಿದೆ ಎಂಬುದಕ್ಕೆ ಸಾಕ್ಷ್ಯಗಳನ್ನು ನೀಡದೇ ಇದ್ದಿದ್ದರಿಂದ ಆತನ ಅರ್ಜಿಯನ್ನ ಕೋರ್ಟ್ ತಿರಸ್ಕರಿಸಿದೆ.
ಪತಿಯೊಂದಿಗೆ ಸಹಬಾಳ್ವೆಯ ಕನಸು ಹೊತ್ತು ಬಂದಿದ್ದವಳನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ. ಹಾಗಾಗಿ ಪ್ರಕರಣದ ವಿಚಾರಣೆಗಾಗಿ ಮತ್ತೆ ಮತ್ತೆ ಅದೇ ನಗರಕ್ಕೆ ಭೇಟಿ ನೀಡುವುದು ಮಹಿಳೆಗೆ ಸಮಸ್ಯೆಯಾಗಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಪತಿ ಪರ ವಕೀಲರ ಮನವಿಯಂತೆ ಆರು ವಾರಗಳ ಅವಧಿಗೆ ಆದೇಶಕ್ಕೆ ಕೋರ್ಟ್ ತಡೆ ನೀಡಿದೆ.