ಟ್ರಾಪಿಕ್ ನ ಕಿರಿಕಿರಿ, ಮನೆಯ ಕಿರಿಕಿರಿ ಆರೋಗ್ಯದ ಸಮಸ್ಯೆ ಹೀಗೆ ಯಾವುದಾದರೂ ಒಂದು ಕಾರಣಕ್ಕೆ ಅನಗತ್ಯವಾಗಿ ಸಿಟ್ಟು ಬರುತ್ತದೆ. ಎಷ್ಟೇ ನಿಯಂತ್ರಿಸಲು ಪ್ರಯತ್ನಿಸಿದರು ಕೆಲವರಿಗೆ ಈ ಸಿಟ್ಟಿನ ಮೇಲೆ ಹತೋಟಿ ಸಾಧಿಸಲು ಸಾಧ್ಯವಾಗುವುದಿಲ್ಲ.
ಇದರಿಂದ ಸಂಬಂಧಗಳು ಹಾಳಾಗುತ್ತದೆ. ನಮ್ಮ ಮನಸ್ಸಿನ ಮೇಲೆಯೇ ನಿಯಂತ್ರಣ ಕಳೆದುಕೊಂಡು ಯಾರಿಗಾದರೂ ಏನಾದರೂ ಹೇಳಿಬಿಡುತ್ತೇವೆ. ಈ ಸಿಟ್ಟನ್ನು ಹೇಗೆ ನಿಯಂತ್ರಿಸಿಕೊಳ್ಳಬಹುದು ಎಂಬುದಕ್ಕೆ ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್.
* ತುಂಬಾ ಸಿಟ್ಟು ಬಂದಾಗ ಒಂದರಿಂದ 10ರವರೆಗೆ ಸಂಖ್ಯೆಗಳನ್ನು ಎಣಿಸುವುದಕ್ಕೆ ಶುರುಮಾಡಿ. ಇದು ನಿಮ್ಮ ಹೃದಯದ ಏರಿಳಿತವನ್ನು ಕಡಿಮೆ ಮಾಡುತ್ತದೆ. ನಿಮ್ಮನ್ನು ಶಾಂತಗೊಳಿಸುತ್ತದೆ. ನಿಧಾನಕ್ಕೆ ಸಿಟ್ಟು ಕಡಿಮೆಯಾಗುತ್ತದೆ.
*ಉಸಿರಾಟದ ಮೇಲೆ ನಿಯಂತ್ರಣವನ್ನು ತಂದುಕೊಳ್ಳುವುದರಿಂದಲೂ ನಮ್ಮ ಸಿಟ್ಟನ್ನು ಕಡಿಮೆ ಮಾಡಿಕೊಳ್ಳಬಹುದು. ನಿಧಾನಕ್ಕೆ ಉಸಿರು ಎಳೆದುಕೊಳ್ಳುವುದು, ಬಿಡುವುದು ಮಾಡಬೇಕು ಇದರಿಂದ ಸಿಟ್ಟನ್ನು ಕಡಿಮೆ ಮಾಡಿಕೊಳ್ಳಬಹುದು.
* ವ್ಯಾಯಾಮ ಕೂಡ ನಮ್ಮ ಸಿಟ್ಟಿನ ಮೇಲೆ ನಿಯಂತ್ರಣ ಸಾಧಿಸಲು ಸಹಾಯಕಾರಿಯಾಗುತ್ತದೆ. ನಮ್ಮ ನರಕೋಶಗಳನ್ನು ಶಾಂತಗೊಳಿಸುತ್ತದೆ. ತುಂಬಾ ಸಿಟ್ಟು ಬಂದಾಗ ವಾಕಿಂಗ್ ಇಲ್ಲವೇ ನಿಮ್ಮಿಷ್ಟ ಚಟುವಟಿಕೆಗಳಿಗೆ ಎದ್ದು ಹೋಗಿಬಿಡಿ. ಅದು ಡಾನ್ಸ್, ಮ್ಯೂಸಿಕ್ , ಜಿಮ್ ಯಾವುದೇ ಆಗಿರಬಹುದು. ಆಗ ಸಿಟ್ಟಿನಿಂದ ಆಗುವ ಅವಘಡವನ್ನು ತಪ್ಪಿಸಬಹುದು.
* ತುಂಬಾ ಸಿಟ್ಟು ಬಂದಾಗ ಹೆಚ್ಚು ಮಾತನಾಡುವುದಕ್ಕಿಂತ ಮೌನವಾಗಿರುವುದು ಒಳ್ಳೆಯದು. ಮಾತನಾಡಿದಷ್ಟು ವಾದ ಹೆಚ್ಚಾಗುತ್ತದೆ. ಮನಸ್ಸಿನ ಮೇಲಿನ ನಿಯಂತ್ರಣ ಕಳೆದುಕೊಳ್ಳುತ್ತೇವೆ. ಅದರ ಬದಲು ಸಿಟ್ಟು ಬಂದಾಗ ಮೌನವಾಗಿದ್ದು ಮನಸ್ಸು ಶಾಂತ ಸ್ಥಿತಿಗೆ ಬರುವವರಗೆ ತಾಳ್ಮೆಯಿಂದ ಇರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.
* ಕೆಲವು ಸಲ ಸಿಟ್ಟು ಬಂದಾಗ ಮಾತನಾಡಿ ಅದನ್ನು ಹೊರಗಡೆ ಹಾಕುವುದೇ ಒಳ್ಳೆಯದು. ಎಲ್ಲಾ ಸಂದರ್ಭದಲ್ಲಿಯೂ ಸುಮ್ಮನಿದ್ದರೆ ನಮ್ಮ ಮನಸ್ಸಿನ ಮೇಲೆ ಮತ್ತಷ್ಟು ಒತ್ತಡವಾಗುತ್ತದೆ. ನಿಮ್ಮದು ತಪ್ಪಿಲ್ಲದಿದ್ದರೆ ಸರಿಯಾಗಿ ಯೋಚಿಸಿ ಮಾತನಾಡಿ. ಸಾತ್ವಿಕ ರೀತಿಯಲ್ಲಿ ಆ ಸಿಟ್ಟನ್ನು ಹೊರಗಡೆ ಹಾಕಿ.