![](https://kannadadunia.com/wp-content/uploads/2022/11/GettyImages-1155686450_thumb-732x549-1.jpg)
ಕುತ್ತಿಗೆ ನೋವು ಬಹುತೇಕರನ್ನು ಕಾಡುವ ಸಮಸ್ಯೆಗಳಲ್ಲೊಂದು. ದಿನವಿಡೀ ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ಎದುರು ಕುಳಿತು ಕೆಲಸ ಮಾಡುವವರಲ್ಲಿ ಕುತ್ತಿಗೆ ನೋವು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಬೆಳಗ್ಗೆ ಎದ್ದ ತಕ್ಷಣ ಕತ್ತಿನಲ್ಲಿ ನೋವು, ಒಂದು ರೀತಿಯ ಭಾರವನ್ನು ಅನುಭವಿಸುತ್ತೇವೆ.
ಕುತ್ತಿಗೆಯನ್ನು ಬಗ್ಗಿಸಲು ಅಥವಾ ಚಲಿಸಲು ಸಾಧ್ಯವಾಗುವುದಿಲ್ಲ. ಕೆಲವರಿಗೆ ಇದರಿಂದಲೇ ತಲೆನೋವು ಕೂಡ ಬರುತ್ತದೆ. ಈ ನೋವು ನಮ್ಮ ದೈನಂದಿನ ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ಕುತ್ತಿಗೆ ನೋವಿಗೆ ಪ್ರಮುಖ ಕಾರಣವೆಂದರೆ ತಪ್ಪಾದ ಪೊಸಿಶನ್‌ನಲ್ಲಿ ಮಲಗುವುದು. ಜೊತೆಗೆ ದಿಂಬನ್ನು ತಪ್ಪು ರೀತಿಯಲ್ಲಿ ಬಳಸುವುದು. ಕೆಲವು ಸುಲಭ ವಿಧಾನಗಳ ಮೂಲಕ ಕುತ್ತಿಗೆ ನೋವಿನ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.
1. ಕುತ್ತಿಗೆಯಲ್ಲಿ ನೋವು ಕಾಣಿಸಿಕೊಂಡಾಗ ಆ ಜಾಗದ ಮೇಲೆ ಐಸ್ ಪ್ಯಾಕ್ ಅಥವಾ ತಣ್ಣೀರಿನ ಪಟ್ಟಿಯನ್ನು ಹಾಕಿಕೊಳ್ಳಿ. ಹೀಗೆ ಮಾಡುವುದರಿಂದ ಕತ್ತಿನ ಸ್ನಾಯುಗಳ ಊತವನ್ನು ಹೋಗಲಾಡಿಸಬಹುದು.
2. ಕುತ್ತಿಗೆ ನೋವನ್ನು ನಿವಾರಿಸಲು ನೀವು ಹೀಟ್ ಪ್ಯಾಕ್ ಅನ್ನು ಸಹ ಬಳಸಬಹುದು. ಇದು ಕೂಡ ನೋವು ನಿವಾರಿಸುವಲ್ಲಿ ಸಹಕಾರಿಯಾಗಿದೆ.
3. ಹಗುರವಾದ ಕೈಗಳಿಂದ ಕುತ್ತಿಗೆಗೆ ಮಸಾಜ್ ಮಾಡುವುದರಿಂದ ಕುತ್ತಿಗೆಯ ಬಿಗಿತವನ್ನು ತೆಗೆದುಹಾಕಬಹುದು. ಸ್ನಾಯು ನೋವು ಕೂಡ ಕಡಿಮೆಯಾಗುತ್ತದೆ. ಸಾಸಿವೆ ಎಣ್ಣೆ ಮತ್ತು ತೆಂಗಿನ ಎಣ್ಣೆಯ ಜೊತೆಗೆ ಮಸಾಜ್‌ಗೆ ಎಳ್ಳೆಣ್ಣೆಯನ್ನು ಸಹ ಬಳಸಬಹುದು.
4. ಹೊಟ್ಟೆಯನ್ನು ಅಡಿಗೆ ಮಾಡಿ ಮಲಗುವುದರಿಂದ ಕುತ್ತಿಗೆ ನೋವು ಕಾಣಿಸಿಕೊಳ್ಳುತ್ತದೆ. ಆ ರೀತಿ ಮಲಗುವ ಬದಲು ಬದಿಯಲ್ಲಿ ಮಲಗುವುದನ್ನು ಅಭ್ಯಾಸ ಮಾಡಿಕೊಳ್ಳಿ. ಅಥವಾ ನೇರವಾಗಿ ಕೂಡ ನಿದ್ರಿಸಬಹುದು. 5. ಕುತ್ತಿಗೆ ನೋವು ವಿಪರೀತವಾಗಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ಕತ್ತಿನ ನರಗಳ ಮೇಲೆ ಒತ್ತಡ ಉಂಟಾಗಿರುವ ಸಾಧ್ಯತೆಯಿರುತ್ತದೆ. ಇದರಿಂದಲೂ ಕತ್ತು ನೋವು ಕಾಣಿಸಿಕೊಳ್ಳುತ್ತದೆ.