ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ’ ಚಿತ್ರ ಕಮಾಲ್ ಮಾಡುತ್ತಿದೆ. ಕನ್ನಡ ಸೇರಿದಂತೆ ಬಿಡುಗಡೆಯಾದ ಎಲ್ಲ ಭಾಷೆಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಹೊಸ ದಾಖಲೆಯನ್ನೇ ಬರೆಯುತ್ತಿದೆ.
ಕಾಂತಾರಾ ಚಿತ್ರವನ್ನು ವೀಕ್ಷಿಸಿದ ಪರಭಾಷಾ ನಟರು ರಿಷಬ್ ಶೆಟ್ಟಿ ಅವರಿಗೆ ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ. ರಜನಿಕಾಂತ್, ಪ್ರಭಾಸ್, ಅನುಷ್ಕಾ ಶೆಟ್ಟಿ ಮೊದಲಾದವರು ಈ ಚಿತ್ರವನ್ನು ಅಪಾರವಾಗಿ ಮೆಚ್ಚಿಕೊಂಡಿದ್ದಾರೆ. ನಟ ರಜನಿಕಾಂತ್, ತಮ್ಮ ಮನೆಗೆ ಬಂದಿದ್ದ ರಿಷಬ್ ಶೆಟ್ಟಿ ಅವರನ್ನು ಅಭಿನಂದಿಸಿದ್ದಾರೆ.
ಇದರ ಮಧ್ಯೆ ರಿಷಬ್ ಶೆಟ್ಟಿ ಅವರ ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದ ರಶ್ಮಿಕಾ ಮಂದಣ್ಣ, ಈವರೆಗೂ ಕಾಂತಾರ ನೋಡಿಲ್ಲವಂತೆ. ಮುಂಬೈನಲ್ಲಿ ಪತ್ರಕರ್ತರು ಪ್ರಶ್ನಿಸಿದ ವೇಳೆ, ನಾನು ಇನ್ನೂ ಸಿನಿಮಾ ನೋಡಿಲ್ಲ. ಬೆಂಗಳೂರಿಗೆ ಹೋದ ಬಳಿಕ ನೋಡುತ್ತೇನೆ ಎಂದು ರಶ್ಮಿಕಾ ಹೇಳಿದ್ದಾರೆ.
ಇದು ನೆಟ್ಟಿಗರನ್ನು ಕೆರಳಿಸಿದೆ. ನೀವು ಚಿತ್ರರಂಗಕ್ಕೆ ಕಾಲಿಡಲು ಕಾರಣಕರ್ತರಾಗಿದ್ದೇ ರಿಷಬ್ ಶೆಟ್ಟಿಯವರು. ಅವರ ಕಾಂತಾರಾ ಚಿತ್ರವನ್ನು ಇಡೀ ಭಾರತೀಯ ಚಿತ್ರರಂಗವೇ ಮೆಚ್ಚಿ ಕೊಂಡಾಡುತ್ತಿದೆ. ಇದರ ಮಧ್ಯೆ ನೀವು ಇನ್ನೂ ಚಿತ್ರ ವೀಕ್ಷಿಸಿಲ್ಲ ಎಂಬ ಉಡಾಫೆ ಉತ್ತರ ನೀಡಿದ್ದೀರಿ ಎಂದು ರಶ್ಮಿಕಾ ಮಂದಣ್ಣ ವಿರುದ್ಧ ಕಿಡಿ ಕಾರಿದ್ದಾರೆ.