ಕೇಂದ್ರದ ಮಾಜಿ ಸಚಿವ ಅಶ್ವನಿ ಕುಮಾರ್ ಇಂದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಪಂಚಾಯತ್ ಆಜ್ ತಕ್ – ಪಂಜಾಬ್ನಲ್ಲಿ ಮಾತನಾಡಿದ್ದ ಅಶ್ವನಿಕುಮಾರ್ ನಾಲ್ಕು ದಶಕಗಳಿಂದ ಜೊತೆಯಾಗಿದ್ದ ಪಕ್ಷವನ್ನು ತ್ಯಜಿಸಿದ್ದರ ಬಗ್ಗೆ ಮಾತನಾಡಿದ್ದಾರೆ. ತಮ್ಮ ಮುಂದಿನ ಹೆಜ್ಜೆಯ ಕುರಿತೂ ಮಾತನಾಡಿದ ಅಶ್ವನಿ ಕುಮಾರ್ ನನಗೆ ಎಲ್ಲಾ ಆಯ್ಕೆಗಳು ಮುಕ್ತವಾಗಿದೆ ಎಂದು ಹೇಳಿದ್ದಾರೆ.
ಈಗ ಕಟ್ಟಲಾಗುತ್ತಿರುವ ಕಾಂಗ್ರೆಸ್ಗೆ ಮುಂದೆ ಕರಾಳ ಭವಿಷ್ಯವಿದೆ. ಪಕ್ಷದ ರಚನೆಯೇ ಟೊಳ್ಳೆನಿಸಿದಾಗ ಮುಂದೆ ಇದು ಸಮಸ್ಯೆಯನ್ನು ತಂದೊಡ್ಡುತ್ತದೆ ಎಂದು ಕೇಂದ್ರದ ಮಾಜಿ ಕಾನೂನು ಸಚಿವ ಅಶ್ವನಿ ಕುಮಾರ್ ಭವಿಷ್ಯ ನುಡಿದಿದ್ದಾರೆ.
ಪಂಜಾಬ್ ವಿಧಾನಸಭೆಯ ಹೊಸ್ತಿಲಲ್ಲಿಯೇ ಕಾಂಗ್ರೆಸ್ನ ಹಿರಿಯ ನಾಯಕ ಪಕ್ಷಕ್ಕೆ ರಾಜೀನಾಮೆ ನೀಡಿರುವುದು ‘ಕೈ’ ಪಡೆಗೆ ನುಂಗಲಾರದ ತುತ್ತಾಗಿದೆ. ಪಕ್ಷಕ್ಕೆ ರಾಜೀನಾಮೆ ನೀಡುವ ವಿಚಾರವಾಗಿ ಮಾತನಾಡಿದ ಅಶ್ವನಿ ಕುಮಾರ್ ಇದೊಂದು ದಿಢೀರ್ ನಿರ್ಧಾರ ಖಂಡಿತವಾಗಿಯೂ ಅಲ್ಲ ಎಂದಿದ್ದಾರೆ.
ಸಂದರ್ಭಗಳು ಯಾವ ರೀತಿ ಇದ್ದವು ಅಂದರೆ ನನ್ನಿಂದ ನಾನು ಬಯಸಿದ ರೀತಿಯಲ್ಲಿಯೇ ಪಕ್ಷಕ್ಕೆ ಕೊಡುಗೆ ನೀಡುವುದು ಸಾಧ್ಯವಿಲ್ಲ ಎಂದೆನಿಸಿತು. ದೇಶಕ್ಕೆ ಹಾಗೂ ಸಮಾಜಕ್ಕಾಗಿ ನನ್ನಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಅಂದ ಮೇಲೆ ನಾನು ಪಕ್ಷದ ಮೇಲೆ ನನ್ನನ್ನು ಹೇರಿಕೊಳ್ಳುವುದು ಉತ್ತಮ ಎಂದು ನನಗೆ ಎನಿಸಲಿಲ್ಲ ಎಂದು ಅಶ್ವನಿ ಕುಮಾರ್ ಹೇಳಿದರು.