ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿದೆ. ಈ ಹಿಂದೆ ಎಲ್ಲಿ ಪಾದಯಾತ್ರೆ ನಿಲ್ಲಿಸಿದ್ದರೋ ಅಲ್ಲಿಂದಲೇ ಪಾದಯಾತ್ರೆ ಆರಂಭಿಸಿರುವ ಕಾಂಗ್ರೆಸ್ ಇಂದು ಬೆಂಗಳೂರಿಗೆ ಹೊರ ವಲಯದ ಸಮೀಪಕ್ಕೆ ಬಂದಿದೆ. ಇದರಿಂದ ಎಚ್ಚರವಾಗಿರುವ ರಾಜಧಾನಿ ಪೊಲೀಸರು ಪಾದಯಾತ್ರೆಯಿಂದ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಭದ್ರತೆ ವಹಿಸಲು ತಯಾರಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಇಂದು ಬೆಂಗಳೂರು ಹೊರವಲಯಕ್ಕೆ ಪಾದ ಯಾತ್ರೆ ಬಂದು ತಲುಪಲಿದೆ, ನಾಳೆ ನಾಡಿದ್ದು ಬೆಂಗಳೂರಿನಲ್ಲಿ ಪಾದಯಾತ್ರೆ ಇರಲಿದೆ. ಹೀಗಾಗಿ ಬೆಂಗಳೂರು ಪೊಲೀಸರು ಭದ್ರತೆ ನೀಡಲು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದಾರೆ. ಅಲ್ಲದೆ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ಇದೆ, ಹೀಗಾಗಿ ಬೆಂಗಳೂರಿನ ಎಲ್ಲಾ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದಿದ್ದಾರೆ.
ಯಾವ ವಿಭಾಗದಲ್ಲಿ ಪಾದಯಾತ್ರೆ ಇರುತ್ತದೆಯೊ ಆ ವಿಭಾಗದ ಡಿಸಿಪಿಗೆ, ಭದ್ರತೆಯ ಜವಾಬ್ದಾರಿ ವಹಿಸಲಾಗಿದೆ. ಅವರಿಗೆ ಉಳಿದ ವಿಭಾಗಗಳ ಪೊಲೀಸರು ಹೆಗಲು ನೀಡಲಿದ್ದಾರೆ. ಅಲ್ಲದೆ ಭದ್ರತೆಗೆಗಾಗಿ 40 KSRP, 30 CAR ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ ಎಂದಿದ್ದಾರೆ.
ಇದೇ ವೇಳೆ ಪಾದಯಾತ್ರೆ ವೇಳೆ ಸಂಚಾರದ ವ್ಯತ್ಯಯವಾಗುವ ಬಗ್ಗೆ ಮಾಹಿತಿ ನೀಡಿರುವ ಅವರು, ಸಂಚಾರ ನಿರ್ವಹಣೆ ಬಗ್ಗೆ ಬೆಂಗಳೂರು ಪೊಲೀಸ್ ವೆಬ್ ಸೈಟ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಲಿದ್ದಾರೆ. ಆದರೂ ಪಾದಯಾತ್ರೆ ನಡೆಯುವ ದಿನಗಳಲ್ಲಿ ಸಂಚಾರ ವ್ಯತ್ಯಯವಾಗುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ಸಾರ್ವಜನಿಕರು ಗಮನ ವಹಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.