ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಈಗಾಗಲೇ ತನ್ನ ಅಭ್ಯರ್ಥಿಗಳ ಎರಡು ಪಟ್ಟಿಯನ್ನು ಬಿಡುಗಡೆ ಮಾಡಿರುವ ಕಾಂಗ್ರೆಸ್, ಮತ್ತೊಂದು ಪಟ್ಟಿ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ. ಇದರ ಮಧ್ಯೆ ಮಾಜಿ ಸಚಿವ ವಿನಯ ಕುಲಕರ್ಣಿ ಧಾರವಾಡ ಕ್ಷೇತ್ರದಿಂದ ಸ್ಪರ್ಧಿಸಲು ಮೊದಲ ಪಟ್ಟಿಯಲ್ಲಿಯೇ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಆದರೆ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ ಗೌಡರ ಕೊಲೆ ಪ್ರಕರಣದಲ್ಲಿ ಬಂಧನವಾಗಿ ಈಗ ಜಾಮೀನಿನ ಮೇಲೆ ಹೊರಬಂದಿರುವ ವಿನಯ ಕುಲಕರ್ಣಿ ಅವರಿಗೆ ಧಾರವಾಡ ಜಿಲ್ಲೆ ಪ್ರವೇಶಿಸದಂತೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. ಹೀಗಾಗಿ ನಾಮಪತ್ರ ಸಲ್ಲಿಸಲು ಹಾಗೂ ಪ್ರಚಾರ ಕಾರ್ಯ ನಡೆಸಲು ವಿನಯ ಕುಲಕರ್ಣಿ ಅವರಿಗೆ ಸಮಸ್ಯೆ ಎದುರಾಗಿದೆ.
ಆದರೆ ಜನಪ್ರತಿನಿಧಿ ಕಾಯ್ದೆ 1951 ರ ಸೆಕ್ಷನ್ 33 ರಡಿ ಚುನಾವಣಾ ಅಭ್ಯರ್ಥಿ ಇಲ್ಲದೆಯೂ ನಾಮಪತ್ರ ಸಲ್ಲಿಸಬಹುದಾಗಿದ್ದು, ಅಭ್ಯರ್ಥಿಯ ಸಹಿಯೊಂದಿಗೆ ಅದೇ ಕ್ಷೇತ್ರದ 10 ಜನ ಮತದಾರರು ಸೂಚಕರಾಗಿ ಸಹಿ ಮಾಡಿದರೆ ಸಾಕಾಗುತ್ತದೆ. ಹೀಗಾಗಿ ವಿನಯ ಕುಲಕರ್ಣಿಯವರಿಗೆ ಖುದ್ದಾಗಿ ನಾಮಪತ್ರ ಸಲ್ಲಿಸಲು ಸಾಧ್ಯವಾಗದಿದ್ದರೂ ಸಹ ಕ್ಷೇತ್ರದ ಅಭ್ಯರ್ಥಿಯಾಗಬಹುದಾಗಿದೆ.
ಇದರ ಮಧ್ಯೆ ವಿನಯ ಕುಲಕರ್ಣಿಯವರು ಧಾರವಾಡ ಜಿಲ್ಲಾ ಪ್ರವೇಶಕ್ಕೆ ಅವಕಾಶ ಕೋರಿ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ಇದರ ವಿಚಾರಣೆ ನಡೆಸಲಾಗಿದೆ. ಏಪ್ರಿಲ್ 11 ರವರೆಗೆ ತಕರಾರು ಸಲ್ಲಿಸಲು ಸಿಬಿಐಗೆ ಅವಕಾಶ ನೀಡಲಾಗಿದ್ದು, ಒಂದೊಮ್ಮೆ ಅವಕಾಶ ಸಿಕ್ಕರೆ ಖುದ್ದಾಗಿ ತೆರಳಿ ನಾಮಪತ್ರ ಸಲ್ಲಿಸಬಹುದಾಗಿದ್ದು, ಜೊತೆಗೆ ಪ್ರಚಾರ ಕಾರ್ಯ ಕೈಗೊಳ್ಳಬಹುದಾಗಿದೆ. ಇಲ್ಲವಾದರೆ ಚಹಾಗಿ ಹತ್ತು ಮತದಾರರ ಸೂಚಕರೊಂದಿಗೆ ಬೆಂಬಲಿಗರ ಮೂಲಕ ನಾಮಪತ್ರ ಸಲ್ಲಿಸಿ ಕ್ಷೇತ್ರದ ಹೊರಗಿದ್ದುಕೊಂಡೆ ಪ್ರಚಾರ ಕಾರ್ಯ ನಡೆಸಬೇಕಾಗುತ್ತದೆ.