ಬಹುತೇಕ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ ರಾಜಸ್ಥಾನ ಕೊಂಚ ನೆಮ್ಮದಿ ನೀಡಿತ್ತು. ಅಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿದ್ದು, ಮುಖ್ಯಮಂತ್ರಿಯಾಗಿ ಅಶೋಕ್ ಗೆಹ್ಲೋಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಮಧ್ಯೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಅಶೋಕ್ ಗೆಹ್ಲೋಟ್ ಕಣಕ್ಕಿಳಿಯುವ ಸಾಧ್ಯತೆ ಇದೆ.
ಆದರೆ ಒಬ್ಬರಿಗೆ ಒಂದೇ ಹುದ್ದೆ ಎಂಬ ಕಾರಣಕ್ಕೆ ಅಶೋಕ್ ಗೆಹ್ಲೋಟ್, ರಾಜಸ್ಥಾನ ಮುಖ್ಯಮಂತ್ರಿ ಸ್ಥಾನ ತೊರೆಯುವುದು ಅನಿವಾರ್ಯವಾಗಿದೆ. ಹೀಗಾಗಿ ತಮ್ಮ ಆಪ್ತರೊಬ್ಬರನ್ನು ಆ ಸ್ಥಾನದಲ್ಲಿ ಕೂರಿಸಬೇಕೆಂಬ ಬಯಕೆಯನ್ನು ಅಶೋಕ್ ಗೆಹ್ಲೋಟ್ ಹೊಂದಿದ್ದು, ಆದರೆ ರಾಹುಲ್ ಗಾಂಧಿ ಯುವ ಮುಖಂಡ ಸಚಿನ್ ಪೈಲೆಟ್ ಪರವಾಗಿದ್ದಾರೆ.
ಹೀಗಾಗಿ ಭಾನುವಾರ ರಾತ್ರಿ ರಾಜಸ್ಥಾನದಲ್ಲಿ ದಿಢೀರ್ ರಾಜಕೀಯ ಬೆಳವಣಿಗೆ ನಡೆದಿದ್ದು, ಬಸ್ ನಲ್ಲಿ ಒಟ್ಟಾಗಿ ತೆರಳಿದ ಅಶೋಕ್ ಗೆಹ್ಲೋಟ್ ಪರವಾಗಿರುವ 92 ಶಾಸಕರು ಸ್ಪೀಕರ್ ಸಿ.ಪಿ. ಜೋಶಿ ಬಳಿ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಈ ಮೂಲಕ ಸಚಿನ್ ಪೈಲೆಟ್ ಗೆ ಮುಖ್ಯಮಂತ್ರಿ ಸ್ಥಾನ ನೀಡಿದರೆ ಸರ್ಕಾರವನ್ನು ಉರುಳಿಸಲೂ ತಾವು ಸಿದ್ದ ಎಂಬ ಸಂದೇಶವನ್ನು ಸಾರಿದ್ದಾರೆ.
ಈ ರಾಜಕೀಯ ಬೆಳವಣಿಗೆ ಕಾಂಗ್ರೆಸ್ ಕೇಂದ್ರ ನಾಯಕರಿಗೆ ತೀವ್ರ ತಲೆನೋವನ್ನು ತಂದಿದ್ದು, ಅಶೋಕ್ ಗೆಹ್ಲೋಟ್ ಮನವೊಲಿಕೆಗೆ ಮುಂದಾಗಿದ್ದಾರೆ. ಆದರೆ ಇದಕ್ಕೆ ಅವರು ಸುತರಾಂ ಒಪ್ಪುತ್ತಿಲ್ಲ ಎನ್ನಲಾಗಿದ್ದು, ತಮ್ಮ ಆಪ್ತರೇ ರಾಜಸ್ಥಾನದ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗಿದೆ. ಮುಂದಿನ ದಿನಗಳಲ್ಲಿ ಇನ್ಯಾವ ಬೆಳವಣಿಗೆ ಸಂಭವಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.