ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತಾಂತರ ನಿಷೇಧ ಕಾಯ್ದೆ ವಾಪಸ್ ವಿಚಾರವಾಗಿ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ ಇಂತಹ ಮನಃಸ್ಥಿತಿಯಿಂದಲೇ ಕಾಂಗ್ರೆಸ್ ಅಧಿಕಾರವನ್ನು ಕಳೆದುಕೊಂಡಿದೆ ಎಂದು ವ್ಯಂಗ್ಯವಾಡಿದರು.
ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾಲಿಬಾನ್ ಮಾದರಿ ಸರ್ಕಾರ ನಿರ್ಮಾಣವಾಗುತ್ತೆ. ಇದು ಜನರಿಗೂ ಗೊತ್ತಿದೆ. ಆದ್ದರಿಂದ ಮುಂದೆಯೂ ಕಾಂಗ್ರೆಸ್ ಅಧಿಕಾರಕ್ಕೆ ಬರೋದಿಲ್ಲ. 2023ರಲ್ಲಿಯೂ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ. ಕಿತ್ತು ಒಗೆಯುವ ಕಿತ್ತು ಹಾಕುವ ಅವಕಾಶ ಜನ ನಿಮಗೆ ಕೊಡುವುದಿಲ್ಲ. ಅವರ ನಾಯಕರು ಪ್ರತಿ ಬಾರಿ ಹೊಸ ಹೊಸ ಕ್ಷೇತ್ರ ಹುಡುಕುವ ಪರಿಸ್ಥಿತಿ ಬಂದಿದೆ ಎಂದು ಲೇವಡಿ ಮಾಡಿದರು.
ಕ್ರಿಶ್ಚಿಯನಿಟಿ ಏನು ಮಾರುಕಟ್ಟೆಯ ವಸ್ತುನಾ ?ಇದೇನು ಸೋಪು ಮಾರಾಟನಾ ?ನಿಮ್ಮ ಧರ್ಮವನ್ನು ಮಾರುಕಟ್ಟೆ ವಸ್ತು ಮಾಡಬೇಡಿ. ಮೋಸದಿಂದ ಮತಾಂತರ ಮಾಡಬೇಡಿ ಎಂದು ಹೇಳಿದರು.
ಜನರನ್ನು ಮಂಗ್ಯಾ ಮಾಡಿ ಮತಾಂತರ ಮಾಡುವುದಕ್ಕೆ ಬ್ರೇಕ್ ಹಾಕಲಾಗಿದೆ. ಚಿಕಿತ್ಸೆ ಕೊಡಿಸಿ ರೋಗ ವಾಸಿ ಮಾಡಿಸುತ್ತಾರೆ.ನಂತರ ಏಸುವಿನ ಪ್ರಾರ್ಥನೆ ಮಾಡಿಸುತ್ತಾರೆ. ಯೇಸುವಿನಿಂದ ಗುಣ ಆಯ್ತು ಅಂತ ಮೋಸದಿಂದ ಮತಾಂತರ ಮಾಡುತ್ತಾರೆ. ಯುರೋಪಿಯನ್ ದೇಶಗಳಲ್ಲಿ ಕ್ರೈಸ್ತ ಧರ್ಮ ನೆಲ ಕಚ್ಚುತ್ತಿದೆ. ಅಲ್ಲಿ ಚರ್ಚ್ಗಳಿಗೆ ಯಾರೂ ಹೋಗುತ್ತಿಲ್ಲ. ಚರ್ಚ್ಗಳು ಅಲ್ಲಿ ಮಾರಾಟಕ್ಕಿದೆ. ಅದಕ್ಕಾಗಿ ಇಲ್ಲಿ ನೆಲೆ ಕಂಡುಕೊಳ್ಳುವ ಪ್ರಯತ್ನವೇ ಮತಾಂತರ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.