ಕೇಂದ್ರದ ಮಾಜಿ ಕಾನೂನು ಸಚಿವ ಅಶ್ವನಿ ಕುಮಾರ್ ಇಂದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವ ಮೂಲಕ ದಶಕಗಳ ಬಾಂಧವ್ಯಕ್ಕೆ ಅಂತ್ಯ ಹಾಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದಿರುವ ಅಶ್ವನಿ ಕುಮಾರ್, ಈ ವಿಷಯದ ಬಗ್ಗೆ ನನ್ನ ಚಿಂತನಶೀಲ ಪರಿಗಣನೆಯನ್ನು ನೀಡಿದ ನಂತರ, ಪ್ರಸ್ತುತ ಪರಿಸ್ಥಿತಿ ಹಾಗೂ ನನ್ನ ಘನತೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷದಿಂದ ಹೊರಗೆ ಇದ್ದುಕೊಂಡೇ ನಾನು ಸಮಾಜ ಸೇವೆಯನ್ನು ಮಾಡಬಹುದು ಎಂದು ತೀರ್ಮಾನಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಕಾಂಗ್ರೆಸ್ ಜೊತೆಗಿನ 46 ವರ್ಷಗಳ ಸುದೀರ್ಘ ಒಡನಾಟದ ಬಳಿಕ ನಾನು ಪಕ್ಷವನ್ನು ತೊರೆಯುತ್ತಿದ್ದೇನೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಕಲ್ಪಿಸಿದ ಉದಾರ ಪ್ರಜಾಪ್ರಭುತ್ವದ ಘನತೆಯ ಭರವಸೆಯ ಆಧಾರದ ಮೇಲೆ ನಾನು ಸಮಾಜಸೇವೆಯನ್ನು ಮಾಡಲು ಆಶಿಸುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.
69 ವರ್ಷದ ಅಶ್ವನಿ ಕುಮಾರ್ ಭಾರತದ ಕಿರಿಯ ಹೆಚ್ಚುವರಿ ಸಾಲಿಸಿಟರ್ ಜನರಲ್ಗಳಲ್ಲಿ ಒಬ್ಬರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಪಂಜಾಬ್ನ ರಾಜ್ಯಸಭಾ ಸದಸ್ಯರೂ ಆಗಿದ್ದರು. ಅಲ್ಲದೇ ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರದ ಅನೇಕ ಖಾತೆಗಳನ್ನು ಹೊಂದಿದ್ದರು.