ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಅಬ್ಬರಿಸುತ್ತಿರುವ ಹಿನ್ನೆಲೆಯಲ್ಲಿ ಇದರ ನಿಯಂತ್ರಣಕ್ಕಾಗಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಈ ಪೈಕಿ ಹೊರ ರಾಜ್ಯಗಳಿಂದ ಅದರಲ್ಲೂ ಮಹಾರಾಷ್ಟ್ರ ಹಾಗೂ ಕೇರಳದಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರಿಗೆ ಆರ್.ಟಿ.ಪಿ.ಸಿ.ಆರ್. ನೆಗೆಟಿವ್ ವರದಿ ಹೊಂದುವುದು ಕಡ್ಡಾಯವಾಗಿದೆ. ಇದರ ಮಧ್ಯೆಯೂ ಈ ನಿಯಮವನ್ನು ಉಲ್ಲಂಘಿಸುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿವೆ.
ಇಂತಹುದೇ ಒಂದು ಪ್ರಕರಣದಲ್ಲಿ ಮುಂಬೈನಿಂದ ಬೆಂಗಳೂರಿಗೆ ಕಳ್ಳದಾರಿಯಲ್ಲಿ ಪ್ರವೇಶಿಸಲು ಮುಂದಾಗಿದ್ದ 2 ಬಸ್ಸುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. ಬೆಳಗಾವಿ ಜಿಲ್ಲೆ ನಿಪ್ಪಾಣಿ ಠಾಣೆ ಪೊಲೀಸರು ಈ 2 ಖಾಸಗಿ ಬಸ್ಸುಗಳು ಕಳ್ಳದಾರಿಯಲ್ಲಿ ರಾಜ್ಯ ಪ್ರವೇಶಿಸುವ ವೇಳೆ ವಶಕ್ಕೆ ಪಡೆದು ಕೇಸ್ ದಾಖಲಿಸಿದ್ದಾರೆ.
ಒಂದು ಬಸ್ಸಿನಲ್ಲಿ 28 ಪ್ರಯಾಣಿಕರ ಪೈಕಿ 24 ಜನರ ಬಳಿ ಆರ್.ಟಿ.ಪಿ.ಸಿ.ಆರ್. ನೆಗೆಟಿವ್ ವರದಿ ಇರಲಿಲ್ಲವೆನ್ನಲಾಗಿದ್ದು, ಮತ್ತೊಂದು ಬಸ್ಸಿನಲ್ಲಿದ್ದ 28 ಪ್ರಯಾಣಿಕರ ಪೈಕಿ 17 ಮಂದಿ ಆರ್.ಟಿ.ಪಿ.ಸಿ.ಆರ್. ನೆಗೆಟಿವ್ ವರದಿ ಹೊಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಸ್ಸುಗಳನ್ನು ವಶಕ್ಕೆ ಪಡೆದ ಪೊಲೀಸರು ಸಾಂಕ್ರಮಿಕ ರೋಗ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.