ಕಳ್ಳತನ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ಈ ಕೆಲಸ ಮಾಡುವ ಮುನ್ನ ಪ್ರತಿ ಬಾರಿಯೂ ತಪ್ಪದೇ ಪೂಜೆ ಮಾಡುತ್ತಿದ್ದ. ಆದರೆ ಈ ಬಾರಿ ಆತನ ನಸೀಬು ಕೈ ಕೊಟ್ಟಂತೆ ಕಾಣುತ್ತದೆ. ಹೀಗಾಗಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ.
ಇಂತಹದೊಂದು ಘಟನೆ ನೆಲಮಂಗಲ ತಾಲೂಕಿನ ತ್ಯಾಗದ ಹಳ್ಳಿಯಲ್ಲಿ ನಡೆದಿದ್ದು, ಅಲ್ಲಿನ ಗ್ರಾಮ ಪಂಚಾಯಿತಿ ಸದಸ್ಯ ರಾಮಚಂದ್ರಯ್ಯ ಎಂಬುವರ ಮನೆಗೆ ಮಧ್ಯಾಹ್ನವೇ ಭದ್ರಾವತಿ ತಾಲೂಕು ಹೊಳೆಹೊನ್ನೂರು ಗ್ರಾಮದ ಸುರೇಶ ನುಗ್ಗಿದ್ದ. ಇದಕ್ಕೂ ಮುನ್ನ ಆತ ಪೂಜೆ ಮಾಡಿಸಿಕೊಂಡು ಬಂದಿದ್ದು, ಹಾಗಾಗಿ ತಾನು ಸಿಕ್ಕಿ ಬೀಳುವುದಿಲ್ಲ ಎಂಬ ದೃಢನಂಬಿಕೆಯೂ ಇತ್ತು.
ರಾಮಚಂದ್ರಯ್ಯನವರ ಮನೆಯಲ್ಲಿದ್ದ 2.5 ಲಕ್ಷ ನಗದು ಜೇಬಿಗಿಳಿಸಿಕೊಂಡ ಸುರೇಶ ಆರಾಮಾಗಿ ಬರುವ ವೇಳೆ ರಾಮಚಂದ್ರಯ್ಯನವರ ಪತ್ನಿ ರೂಪ ಮನೆಗೆ ಬಂದಿದ್ದಾರೆ. ಮನೆಯೊಳಗೆ ಅಪರಿಚಿತನಿದ್ದನ್ನು ಕಂಡು ಕೂಡಲೇ ಬಾಗಿಲು ಹಾಕಿ ಅಕ್ಕಪಕ್ಕದವರಿಗೆ ತಿಳಿಸಿದ್ದು, ಕಳ್ಳ ಸುರೇಶನನ್ನು ಹಿಡಿದು ಥಳಿಸಿದ ಬಳಿಕ ಗ್ರಾಮಾಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.