ದೇಹವನ್ನು ಫಿಟ್ ಆಗಿಟ್ಟುಕೊಳ್ಳುವುದು ಬಹಳ ದೊಡ್ಡ ಚಾಲೆಂಜ್. ಇದಕ್ಕಾಗಿ ನಾವು ಡಯಟ್, ವರ್ಕೌಟ್ ಹೀಗೆ ನಾನಾ ಕಸರತ್ತು ಮಾಡುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಕಳೆದ 24 ವರ್ಷಗಳಿಂದ ಕೇವಲ ಎಳನೀರು ಕುಡಿದು ಬದುಕುತ್ತಿದ್ದಾರೆ. ಬಾಲಕೃಷ್ಣನ್ ಎಂಬ ಈ ವ್ಯಕ್ತಿಗೆ ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಕಾಯಿಲೆಯಿತ್ತು. ಈ ಕಾಯಿಲೆಯಿಂದ ಗುಣಮುಖರಾಗಲು 24 ವರ್ಷಗಳ ಕಾಲ ಎಳನೀರು ಕುಡಿದು ಬದುಕಿದ್ದಾರೆ.
ಇವರು ತೆಂಗಿನ ಕಾಯಿಯನ್ನೇ ಆಹಾರವಾಗಿ ಸೇವಿಸುತ್ತಾರೆ ಜೊತೆಗೆ ಎಳನೀರು ಕುಡಿಯುತ್ತಾರೆ. ಇದನ್ನು ಬಿಟ್ಟರೆ ಬೇರೆ ಯಾವುದೇ ಆಹಾರವನ್ನು ಸೇವಿಸುವುದಿಲ್ಲ. ಕಳೆದ 24 ವರ್ಷಗಳಿಂದ ತೆಂಗಿನಕಾಯಿಯನ್ನು ಹೊರತುಪಡಿಸಿ ಬೇರೇನನ್ನೂ ತಿಂದಿಲ್ಲ ಎಂದು ಖುದ್ದು ಬಾಲಕೃಷ್ಣನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಕಾಯಿಲೆ ವಿರುದ್ಧ ಹೋರಾಡುವ ಶಕ್ತಿ ತೆಂಗಿನಕಾಯಿಯಲ್ಲಿದೆ.
ಕ್ಯಾಲ್ಸಿಯಂ, ಮೆಗ್ನೀಸಿಯಮ್, ಸೋಡಿಯಂ ಮತ್ತು ಪೊಟ್ಯಾಸಿಯಮ್‌ನಂತಹ ಖನಿಜಗಳು ಇದರಲ್ಲಿವೆ. ಹಾಗಾಗಿ ತೆಂಗಿನಕಾಯಿ ಮತ್ತು ಎಳನೀರು ಸೇವನೆಯಿಂದ ತಾನು ಶಕ್ತಿಯನ್ನು ಮರಳಿ ಪಡೆಯಲು ಸಾಧ್ಯವಾಯಿತು ಅಂತಾ ಬಾಲಕೃಷ್ಣನ್ ಹೇಳಿದ್ದಾರೆ. ಸದ್ಯ ಕಾಯಿಲೆಯಿಂದ ಗುಣಮುಖರಾಗಿರೋ ಅವರು ಫಿಟ್ & ಫೈನ್ ಆಗಿದ್ದಾರೆ. ಈಗಲೂ ಎಳನೀರು ಮತ್ತು ತೆಂಗಿನಕಾಯಿಯನ್ನು ಮಾತ್ರ ಸೇವಿಸುತ್ತಾರೆ. ಬಾಲಕೃಷ್ಣನ್ ಅವರ ಬಗೆಗಿನ ಈ ಇಂಟ್ರೆಸ್ಟಿಂಗ್ ಸಂಗತಿ ಕೇಳಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
GERD ಅಥವಾ ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಕಾಯಿಲೆ ಜೀರ್ಣಕ್ರಿಯೆಗೆ ಸಂಬಂಧಪಟ್ಟ ರೋಗ. ಈ ಕಾಯಿಲೆಗೆ ತುತ್ತಾದರೆ ಹೊಟ್ಟೆಯ ಆಮ್ಲ ಅಥವಾ ಪಿತ್ತರಸವು ಆಹಾರ ಪೈಪ್‌ನ ಒಳಪದರವನ್ನು ಕೆರಳಿಸುತ್ತದೆ. ಇದು ದೀರ್ಘಕಾಲ ಕಾಡುವಂತಹ ಸಮಸ್ಯೆ. ಹೊಟ್ಟೆಯ ಆಮ್ಲ ಅಥವಾ ಪಿತ್ತರಸವು ಆಹಾರದ ಪೈಪ್‌ಗೆ ಹರಿಯುತ್ತದೆ ಮತ್ತು ಒಳಪದರವನ್ನು ಕಿರಿಕಿರಿಗೊಳಿಸುತ್ತದೆ. ಇದರಿಂದ ಎದೆಯುರಿ, ಆಸಿಡ್ ರಿಫ್ಲಕ್ಸ್ ಸೇರಿದಂತೆ ಅನೇಕ ತೊಂದರೆಗಳಾಗುತ್ತವೆ.
ತಜ್ಞರ ಪ್ರಕಾರ ತೆಂಗಿನಕಾಯಿಯು pH ಸಮತೋಲನವನ್ನು ಉತ್ತೇಜಿಸುವ ಮತ್ತು ಆಸಿಡ್ ರಿಫ್ಲಕ್ಸ್ ಅನ್ನು ನಿಯಂತ್ರಿಸಲು ಸಹಾಯ ಮಾಡುವ ಎಲೆಕ್ಟ್ರೋಲೈಟ್‌ಗಳನ್ನು ಹೊಂದಿರುತ್ತದೆ, ಇದು ನಿಮ್ಮ ದೇಹಕ್ಕೆ ಒಳ್ಳೆಯದು. ತೆಂಗಿನಕಾಯಿಯನ್ನು ಆಹಾರವಾಗಿ ತೆಗೆದುಕೊಳ್ಳಬಹುದು, ಅದರಲ್ಲಿ ಕಾರ್ಬ್ಸ್ ಕಡಿಮೆ. ಆದ್ದರಿಂದ ಕಾರ್ಬೋಹೈಡ್ರೇಟ್ ಭರಿತ ತಿಂಡಿಗಳಿಗೆ ಇದು ಅತ್ಯುತ್ತಮ ಪರ್ಯಾಯವಾಗಿದೆ.
ಇದು ಪೊಟ್ಯಾಸಿಯಮ್, ಸೋಡಿಯಂ, ಮ್ಯಾಂಗನೀಸ್, ವಿಟಮಿನ್ ಬಿ, ತಾಮ್ರ ಮತ್ತು ಕಬ್ಬಿಣದಂತಹ ಖನಿಜಗಳು ಮತ್ತು ಪೋಷಕಾಂಶಗಳನ್ನು ಒಳಗೊಂಡಿದೆ. ಮ್ಯಾಂಗನೀಸ್ ನಮ್ಮ ಮೂಳೆಗಳ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. GERD ಸಮಸ್ಯೆ ಇರುವವರು ಓಟ್ ಮೀಲ್, ಗಸಗಸೆ, ಬ್ರೌನ್ ರೈಸ್, ಗೆಣಸು, ಆಲೂಗಡ್ಡೆ, ಕ್ಯಾರೆಟ್ ಮತ್ತು ಬೀಟ್‌ರೂಟ್‌ನಂತಹ ಪದಾರ್ಥಗಳನ್ನೇ ಸೇವಿಸಬೇಕು. ಹಸಿರು ತರಕಾರಿಗಳಾದ ಶತಾವರಿ, ಕೋಸುಗಡ್ಡೆ ಮತ್ತು ಹಸಿರು ಬೀನ್ಸ್ ಕೂಡ ಸೇವನೆ ಮಾಡಬಹುದು.