ಏಷ್ಯಾ ಕಪ್ನಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಯಾಗುತ್ತಿದ್ದು, ಪಂದ್ಯಕ್ಕಾಗಿ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಪಂದ್ಯದಲ್ಲಿ ಎಲ್ಲರ ಗಮನ ವಿರಾಟ್ ಕೊಹ್ಲಿ ಮೇಲಿರಲಿದೆ. ಯಾಕಂದ್ರೆ ಕೊಹ್ಲಿ ಕಳೆದ ಹಲವು ತಿಂಗಳುಗಳಿಂದ ಕಳಪೆ ಫಾರ್ಮ್ನಿಂದ ಕಂಗೆಟ್ಟಿದ್ದಾರೆ. ಪಾಕ್ ವಿರುದ್ಧದ ಪಂದ್ಯದಲ್ಲಾದ್ರೂ ವಿರಾಟ್ ಫಾರ್ಮ್ಗೆ ಮರಳಲಿ ಅನ್ನೋದು ಅಭಿಮಾನಿಗಳ ಹಾರೈಕೆ.
ಪಂದ್ಯಕ್ಕೂ ಮುನ್ನವೇ ಅಚ್ಚರಿಯ ಸಂಗತಿಗಳನ್ನು ವಿರಾಟ್ ಕೊಹ್ಲಿ ಬಹಿರಂಗಪಡಿಸಿದ್ದಾರೆ. ಸುದೀರ್ಘ ವಿರಾಮದ ನಂತರ ವಿರಾಟ್ ಕೊಹ್ಲಿ ಟೀಂ ಇಂಡಿಯಾಗೆ ವಾಪಸ್ಸಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ಗಳ ಸರಣಿಯ ನಂತರ ಕೊಹ್ಲಿ ವಿಶ್ರಾಂತಿ ತೆಗೆದುಕೊಳ್ಳಲು ನಿರ್ಧರಿಸಿದ್ದರು.
ಕಳೆದ 10 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕೊಹ್ಲಿ ಒಂದು ತಿಂಗಳ ಕಾಲ ಬ್ಯಾಟ್ ಅನ್ನೇ ಸ್ಪರ್ಷಿಸಿಲ್ಲವಂತೆ. ಅಂದ್ರೆ ಒಂದು ತಿಂಗಳು ಕೊಹ್ಲಿ ಕ್ರಿಕೆಟ್ ಆಡಿಲ್ಲ, ಅಭ್ಯಾಸ ಕೂಡ ಮಾಡಿಲ್ಲ. ಸಂಪೂರ್ಣ ವಿಶ್ರಾಂತಿ ಪಡೆದಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿದ ಕೊಹ್ಲಿ, ’10 ವರ್ಷಗಳಲ್ಲಿ ಮೊದಲ ಬಾರಿಗೆ, ನಾನು ಒಂದು ತಿಂಗಳ ಕಾಲ ನನ್ನ ಬ್ಯಾಟ್ ಹಿಡಿದಿಲ್ಲ. ನಾನು ನನ್ನ ತೀವ್ರತೆಯನ್ನು ಸ್ವಲ್ಪ ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದೇನೆ ಎಂದು ಅರಿತುಕೊಂಡೆ. ಬಿಡುವು ಮಾಡಿಕೊಂಡು ವಿಶ್ರಾಂತಿ ತೆಗೆದುಕೊಳ್ಳುವಂತೆ ನನ್ನ ಮನಸ್ಸು ಹೇಳುತ್ತಿತ್ತು ಅಂತಾ ತಮ್ಮ ಮನದ ಮಾತನ್ನು ಹಂಚಿಕೊಂಡಿದ್ದಾರೆ.
“ನಾನು ಮಾನಸಿಕವಾಗಿ ಸದೃಢವಾಗಿರುವ ವ್ಯಕ್ತಿ ಎಂದು ಭಾವಿಸಿದ್ದೆ. ಆದರೆ ಪ್ರತಿಯೊಬ್ಬರಿಗೂ ಒಂದು ಮಿತಿ ಇರುತ್ತದೆ ಮತ್ತು ನೀವು ಆ ಮಿತಿಯನ್ನು ಗುರುತಿಸಬೇಕು” ಎಂದ ವಿರಾಟ್, ತಮಗಾದ ಅನುಭವವನ್ನು ಬಿಚ್ಚಿಟ್ಟರು.
ಈ ಸಮಯ ನನಗೆ ಬಹಳಷ್ಟು ಕಲಿಸಿದೆ. ನಾನು ಮಾನಸಿಕವಾಗಿಯೂ ದುರ್ಬಲನಾಗಿದ್ದೆ ಎಂದು ಒಪ್ಪಿಕೊಳ್ಳಲು ನನಗೆ ಯಾವುದೇ ತೊಂದರೆ ಇಲ್ಲ. ಇದು ತುಂಬಾ ಸಾಮಾನ್ಯ ವಿಷಯ, ಆದರೆ ಹಿಂಜರಿಕೆಯಿಂದ ನಾವು ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡುವುದಿಲ್ಲ. ದುರ್ಬಲ ಎಂದು ಒಪ್ಪಿಕೊಳ್ಳುವುದಕ್ಕಿಂತ ಬಲಶಾಲಿ ಎಂದು ನಟಿಸುವುದು ತುಂಬಾ ಅಪಾಯಕಾರಿʼʼ ಎನ್ನುವ ಮೂಲಕ ಕೊಹ್ಲಿ ತಮ್ಮ ಮಾನಸಿಕ ಆರೋಗ್ಯದಲ್ಲಾದ ಸಮಸ್ಯೆಗಳನ್ನು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಫಾರ್ಮ್ಗೆ ಮರಳುವುದು ಟೀಂ ಇಂಡಿಯಾಕ್ಕೆ ಬಹಳ ಮುಖ್ಯ. ಈ ಸುದೀರ್ಘ ವಿರಾಮದ ನಂತರ ಅಭಿಮಾನಿಗಳು ಅವರಿಂದ ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸುತ್ತಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ಅರ್ಧಶತಕ ಸಿಡಿಸಿದ ಬ್ಯಾಟ್ಸ್ಮನ್ ಕೂಡ ವಿರಾಟ್. ಅವರು ಭಾರತದ ಪರ 30 ಅರ್ಧಶತಕಗಳನ್ನು ಗಳಿಸಿದ್ದಾರೆ. ಹಾಗಾಗಿ ಪಾಕ್ ವಿರುದ್ಧ ಕೊಹ್ಲಿ ಸೆಂಚುರಿ ಸಿಡಿಸಲಿ ಅನ್ನೋದು ಅಭಿಮಾನಿಗಳ ಆಶಯ.
ಏಷ್ಯಾಕಪ್ನಲ್ಲೂ ವಿರಾಟ್ ಕೊಹ್ಲಿಯ ಅಂಕಿಅಂಶಗಳು ಉತ್ತಮವಾಗಿವೆ. ವಿರಾಟ್ ಕೊಹ್ಲಿ ನಾಲ್ಕನೇ ಬಾರಿಗೆ ಏಷ್ಯಾಕಪ್ನಲ್ಲಿ ಆಡುತ್ತಿದ್ದಾರೆ. ಇದುವರೆಗೆ 16 ಏಕದಿನ ಪಂದ್ಯಗಳಲ್ಲಿ 63.83 ಸರಾಸರಿಯಲ್ಲಿ 766 ರನ್ ಗಳಿಸಿದ್ದಾರೆ. ಟಿ 20ಯಲ್ಲಿ 5 ಪಂದ್ಯಗಳನ್ನಾಡಿ 76.50 ರ ಸರಾಸರಿಯಲ್ಲಿ 153 ರನ್ ಗಳಿಸಿದ್ದಾರೆ. ಏಷ್ಯಾ ಕಪ್ನಲ್ಲಿ ಪಾಕಿಸ್ತಾನದ ವಿರುದ್ಧ ವಿರಾಟ್ 183 ರನ್ ಬಾಚಿಕೊಂಡಿದ್ದರು. ಇದು ಏಕದಿನದಲ್ಲಿ ಅವರ ಅತ್ಯುತ್ತಮ ಸ್ಕೋರ್.